ಅಧಿವೇಶನ ಸಮಯದಲ್ಲಿ ವಿಪರೀತ ಖರ್ಚು: ಕಡಿವಾಣ ಹಾಕಲು ಬೆಳಗಾವಿ ಜಿಲ್ಲಾಡಳಿತ ಮುಂದು
ಡಿಸೆಂಬರ್ 13ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಅಧಿಕ ವೆಚ್ಚವನ್ನು ತಪ್ಪಿಸಲು ಹಲವು ಕ್ರಮಗಳಿಗೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿದೆ.
Published: 29th November 2021 01:26 PM | Last Updated: 29th November 2021 02:50 PM | A+A A-

ಕರ್ನಾಟಕ ವಿಧಾನಸಭೆ
ಬೆಳಗಾವಿ: ಡಿಸೆಂಬರ್ 13ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಅಧಿಕ ವೆಚ್ಚವನ್ನು ತಪ್ಪಿಸಲು ಹಲವು ಕ್ರಮಗಳಿಗೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿದೆ.
ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು ಅಧಿವೇಶನದ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಿದೆ. ಬೆಳಗಾವಿಯಲ್ಲಿ ಶಾಸಕಾಂಗ ಅಧಿವೇಶನವನ್ನು ನಡೆಸಲು ಆಗುತ್ತಿರುವ ಅಧಿಕ ವೆಚ್ಚದ ಬಗ್ಗೆ ಈ ಹಿಂದೆ ವ್ಯಾಪಕ ಟೀಕೆ, ಆಕ್ಷೇಪಗಳು ಕೇಳಿಬಂದಿದ್ದವು. ಶಾಸಕರು, ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಅಧಿವೇಶನ ಸಮಯದಲ್ಲಿ ಹೊಟೇಲ್ ಗಳಲ್ಲಿ ಉಳಿದುಕೊಳ್ಳುವುದಕ್ಕೆ ಅಧಿಕ ವೆಚ್ಚವಾಗುತ್ತದೆ ಎಂದು ಸರ್ಕಾರದ ಗಮನ ಸೆಳೆಯಲಾಗಿತ್ತು.
ಅಧಿವೇಶನದ ವೆಚ್ಚ ಮತ್ತು ಎಲ್ಲ ಕಾಮಗಾರಿಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾಡಳಿತ ಐದು ಸಮಿತಿಗಳನ್ನು ರಚಿಸಲಿದ್ದು, ಅಧಿಕ ಖರ್ಚು ತಪ್ಪಿಸುವುದು ಹೇಗೆ ಎಂಬ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ. ಕಳೆದ ಅಧಿವೇಶನಗಳಲ್ಲಿ ಎದುರಿಸಿದ ಸಮಸ್ಯೆಗಳು ಈ ಬಾರಿ ಎದುರಾಗಬಾರದು ಎಂದು ಸಮಿತಿ ಒತ್ತು ಕೊಡಲಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಶಾಸಕರು, 75 ವಿಧಾನ ಪರಿಷತ್ ಸದಸ್ಯರು ಮತ್ತು ವಿವಿಧ ಇಲಾಖೆಗಳ ಸಾವಿರದ 200 ಕ್ಕೂ ಹೆಚ್ಚು ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳು, ವಾಹನ ಚಾಲಕರು, ಗನ್‌ಮೆನ್‌ಗಳು ಸೇರಿದಂತೆ ಇತರ ಸರ್ಕಾರಿ ಸಿಬ್ಬಂದಿಗಳು ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 13 ರಿಂದ ಬೆಳಗಾವಿ ಅಧಿವೇಶನ: ರಾಜ್ಯಪಾಲರ ಅಧಿಸೂಚನೆ
ಅಧಿವೇಶನದಲ್ಲಿ ಇವರ ವಾಸ್ತವ್ಯ, ಪ್ರಯಾಣ ಮತ್ತು ಆಹಾರಕ್ಕಾಗಿ ಈ ಹಿಂದೆ ಕೋಟಿಗಟ್ಟಲೆ ಖರ್ಚು ಮಾಡಿದ ಸರ್ಕಾರ, ಈಗ ವೆಚ್ಚಗಳ ಮೇಲೆ ನಿಗಾ ಇಡಲಿದೆ ಎಂದು ಮೂಲಗಳು ತಿಳಿಸಿವೆ. 2018 ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನಮಂಡಲದ 10 ದಿನಗಳ ಚಳಿಗಾಲದ ಅಧಿವೇಶನ ಸಮಯದಲ್ಲಿ ಸರ್ಕಾರವು 13.85 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಮಾಹಿತಿ ಸಿಕ್ಕಿತ್ತು.
ಸುವರ್ಣ ವಿಧಾನಸೌಧವು ಬೆಳಗಾವಿ ನಗರದಿಂದ ಕೇವಲ 8 ಕಿಮೀ ದೂರದಲ್ಲಿದೆ, ಅಲ್ಲಿ ಶಾಸಕರು ಮತ್ತು ಎಲ್ಲಾ ವಿಐಪಿಗಳು ಅಧಿವೇಶನದ ಸಮಯದಲ್ಲಿ 10 ದಿನಗಳ ಕಾಲ ವಿವಿಧ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದರೂ, ಶಾಸಕರಿಗೆ ಪ್ರಯಾಣ ಭತ್ಯೆಯಾಗಿ ದಿನಕ್ಕೆ 2,500 ರೂಪಾಯಿ, ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ 67 ಐಷಾರಾಮಿ ಹೋಟೆಲ್‌ಗಳಲ್ಲಿ ಶಾಸಕರು, ವಿಐಪಿಗಳು ಮತ್ತು ಅಧಿಕಾರಿಗಳು ಉಳಿದುಕೊಂಡಿದ್ದಕ್ಕಾಗಿ ಇನ್ನೂ 4.42 ಕೋಟಿ ರೂಪಾಯಿ ಬಿಲ್ ಪಾವತಿಸಲಾಗಿದೆ.
10 ದಿನಗಳ ಅಧಿವೇಶನದಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲಿನ ಬಹುತೇಕ ಎಲ್ಲಾ ಹೋಟೆಲ್‌ಗಳು, ಲಾಡ್ಜ್‌ಗಳು, ರೆಸಾರ್ಟ್‌ಗಳು ಮತ್ತು ಅತಿಥಿ ಗೃಹಗಳನ್ನು ಅತಿಥಿಗಳಿಗಾಗಿ ಕಾಯ್ದಿರಿಸಲಾಗಿದೆ.