ಸಿಂದಗಿ, ಹಾನಗಲ್ ಉಪ ಚುನಾವಣೆ- ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್'ಗೆ ರವಾನಿಸಿದ ರಾಜ್ಯ ಕಾಂಗ್ರೆಸ್

ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ರಾಜ್ಯ ಕಾಂಗ್ರೆಸ್, ಪಟ್ಟಿಯನ್ನು ಹೈಕಮಾಂಡ್'ಗೆ ರವಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ರಾಜ್ಯ ಕಾಂಗ್ರೆಸ್, ಪಟ್ಟಿಯನ್ನು ಹೈಕಮಾಂಡ್'ಗೆ ರವಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 8 ಅಂತಿಮ ದಿನವಾಗಿದೆ. ಹೀಗಾಗಿ  ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್'ಗೆ ಕಳುಹಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಕೇಂದ್ರದ ನಾಯಕರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ. 

ಎರಡೂ ಕ್ಷೇತ್ರಗಳಲ್ಲಿ ಪಕ್ಷ ಈಗಾಗಲೇ ಚುನಾವಣಾ ಕಾರ್ಯಗಳನ್ನು ಆರಂಭಿಸಿದೆ. ಪಕ್ಷದ ಹಿರಿಯ ನಾಯಕರು ಸಿಂದಗಿಯಲ್ಲಿ ಅಕ್ಟೋಬರ್ 4 ರಂದು ಸಭೆಗಳನ್ನು ನಡೆಸಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 8 ರಂದು ಭೇಟಿ ನೀಡಲಿದ್ದಾರೆ. ಹಾನಗಲ್ ನಲ್ಲೂ ಅಕ್ಟೋಬರ್ 7 ರಂದು ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ನಡುವೆ ಜೆಡಿಎಸ್ ಎರಡೂ ಸ್ಥಾನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಲು ಶಿವಕುಮಾರ್ ಅವರು ನಿರಾಕರಿಸಿದ್ದಾರೆ. ಅದು ರಾಜಕೀಯ ತಂತ್ರಗಾರಿಕೆ. ಅದರ ಬಗ್ಗೆ ನಾವು ಚರ್ಚಿಸುವುದು ಬೇಡ. ನಮ್ಮ ಕರ್ತವ್ಯ ನಾವು ಮಾಡೋಣ ಎಂದು ಹೇಳಿದ್ದಾರೆ. 

ಇದೇ ವೇಳೆ ಪರಮೇಶ್ವರ ಅವರು ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರು ಯಾವ ಆಸೆ ಬೇಕಾದರೂ ಪಡಬಹುದು. ಅದರಲ್ಲಿ ತಪ್ಪಿಲ್ಲ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿ ಕಾರ್ಯವಹಿಸಿದ್ದು, ಏನು ಹೇಳಬೇಕು, ಏನು ಹೇಳಬಾರದು ಎಂಬ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ ಸದ್ಯಕ್ಕೆ ಈ ಬಗ್ಗೆ ಚರ್ಚೆ ಬೇಡ. ಮೊದಲು ಎಲ್ಲ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರೋಣ’ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com