ಸಿದ್ದರಾಮಯ್ಯ
ಸಿದ್ದರಾಮಯ್ಯ

ಸೋನಿಯಾ ಗಾಂಧಿಗೆ ಅನಾರೋಗ್ಯ, ರಾಹುಲ್ ಗಾಂಧಿಯವರೇ ಪಕ್ಷ ಮುನ್ನಡೆಸಬೇಕು: ಸಿದ್ದರಾಮಯ್ಯ

ಸೋನಿಯಾ ಗಾಂಧಿಯವರ ಆರೋಗ್ಯ ಹದಗೆಡುತ್ತಿದ್ದು, ಇದೀಗ ಅವರ ಪುತ್ರ ರಾಹುಲ್ ಗಾಂಧಿಯವರೇ ಪಕ್ಷವನ್ನು ಮುನ್ನಡೆಯಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: ಸೋನಿಯಾ ಗಾಂಧಿಯವರ ಆರೋಗ್ಯ ಹದಗೆಡುತ್ತಿದ್ದು, ಇದೀಗ ಅವರ ಪುತ್ರ ರಾಹುಲ್ ಗಾಂಧಿಯವರೇ ಪಕ್ಷವನ್ನು ಮುನ್ನಡೆಯಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಐಸಿಸಿ ಅಧ್ಯಕ್ಷರಾಗುವಂತೆ ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿದ್ದೇನೆ. ಹಿಂದಿನಿಂದಲೂ ನಾನಿದನ್ನೇ ಹೇಳಿಕೊಂಡು ಬಂದಿದ್ದೇನೆ. ಹಾಗೆಂದು ಸೋನಿಯಾ ಅವರು ತಮ್ಮ ಕರ್ತವ್ಯ ನಿಭಾಯಿಸಲು ಅಸಮರ್ಥರಾಗಿದ್ದಾರೆಂಬುದು ನನ್ನ ಅರ್ಥವಲ್ಲ. ಅವರ ಆರೋಗ್ಯ ಹದಗೆಡುತ್ತಿದೆ. ಹೀಗಾಗಿಯೇ ಅಧ್ಯಕ್ಷ ಸ್ಥಾನ ಶೀಘ್ರಾತಿ ಶೀಘ್ರದಲ್ಲಿ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಗೆ ಸಲಹೆ ನೀಡುತ್ತಿದ್ದೇನೆಂದು ಹೇಳಿದ್ದಾರೆ. 

ಬಳಿಕ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳದಿರುವ ಬಗ್ಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ‌ಬರುವಂತೆ ನನಗೆ ಆಹ್ವಾನವನ್ನೇ ನೀಡಿಲ್ಲ.‌ ಆ ವಿಷಯದ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಆದರೂ ಅವರಿಗೆ ಈ ವಿಷಯದ ಬಗ್ಗೆ ಬೇಜಾರಾಗಿದೆ ಎಂದರೆ ಯಾವ ರೀತಿ ಸ್ಪಷ್ಟನೆ ಕೊಡಬೇಕು? ಎಂದರು.

ಚರ್ಚೆಯಾಗಿದ್ದರೆ ತಾನೇ ಮನಸ್ತಾಪ ಮೂಡೋದು? ಇಷ್ಟು ಸ್ಪಷ್ಟವಾಗಿ ಹೇಳಿದ್ದರೂ ಪತ್ರಿಕೆಗಳಲ್ಲಿ ಈ ವಿಚಾರದ ಬಗ್ಗೆ ಕಲ್ಪಿತ ವರದಿಗಳು ಬರುತ್ತಿವೆ ಎಂದರೆ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಮರೆತಿವೆ ಎಂಬುದಾಗಿ ಹೇಳಬೇಕಾಗುತ್ತದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಭಕ್ತರ ಸರ್ಕಾರ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕಾಗಿ ಕಿತ್ತಾಟ ಮಾಡುತ್ತಿದೆ. ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿದೆ ಎಂದ ಅವರು, ಜಿ.ಎಸ್.ಟಿ ಪರಿಹಾರ, ನಮ್ಮ ತೆರಿಗೆ ಪಾಲಿನ ಹಣವನ್ನು ರಾಜ್ಯ ಸರ್ಕಾರ ಗಟ್ಟಿಧ್ವನಿಯಲ್ಲಿ ಕೇಳಬೇಕು. ಇದೇನು ಭಿಕ್ಷೆಯಲ್ಲ, ನಮ್ಮ ಹಕ್ಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ. ಏಪ್ರಿಲ್ ಇಂದ ಸೆಪ್ಟೆಂಬರ್ ವರೆಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 3,000 ಕೋಟಿ ರೂಪಾಯಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ. ಸ್ಟಾಲಿನ್ ಸರ್ಕಾರ ಮೂರು ರೂಪಾಯಿ ತೆರಿಗೆ ಕಡಿಮೆ ಮಾಡಿದೆ, ನಮ್ಮ ರಾಜ್ಯದಲ್ಲಿ ಕನಿಷ್ಟ ಹತ್ತು ರೂಪಾಯಿ ಕಡಿಮೆ ಮಾಡಬೇಕು. ಆಗ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ, ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು, ಕರ್ನಾಟಕದಲ್ಲಿ ಈ ವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ ಎಂದರು.

ವಿದ್ಯುತ್ ಘಟಕಗಳನ್ನು ಖಾಸಗೀಕರಣ ಮಾಡಬಾರದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com