ಸಿದ್ಧಹಸ್ತ ಸೂತ್ರಧಾರಿಯಿಂದ ಅಲ್ಪಸಂಖ್ಯಾತರ ನರಮೇಧ: ಕುಮಾರಸ್ವಾಮಿ
ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ...
Published: 16th October 2021 08:42 PM | Last Updated: 16th October 2021 08:42 PM | A+A A-

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಆರೋಪ, ಪ್ರತ್ಯಾರೋಪ ಪರಾಕಾಷ್ಠೆಗೆ ತಲುಪಿದೆ.
ಇಬ್ಬರೂ ನಾಯಕರು ಪ್ರತಿನಿತ್ಯವೂ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ನಿಂದನೆ, ದೂಷಣೆ ಮತ್ತು ಕೆಸರು ಎರಚುವ ರಾಜಕಾರಣದಲ್ಲಿ ನಿರತವಾಗಿದ್ದು, ಜನರಿಗೆ ಒಂದು ಕಡೆ ಪುಕ್ಕಟೆ ಮನರಂಜನೆಯಾಗಿದ್ದರೆ ಮತ್ತೊಂದು ಕಡೆ ವಾಕರಿಕೆ ಮತ್ತು ಅಸಹ್ಯ ಹುಟ್ಟಿಸಿದೆ.
ಸಿಂದಗಿ ಮತ್ತು ಹಾನಗಲ್‌ನಲ್ಲಿ ಮತ ವಿಭಜನೆ ಮಾಡಲು ಜೆಡಿಎಸ್ ಪಕ್ಷ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಅಲ್ಪ ಸಂಖ್ಯಾತರ ನಾಯಕರ ಟರ್ಮಿನೇಟರ್ ಎಂದು ಜರೆದಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣದ ಪೇಟೆಂಟ್ ತೆಗೆದುಕೊಂಡವರಂತೆ ಪೋಸು ಕೊಡುವ ಸಿದ್ಧಹಸ್ತ ಶೂರನ ನಿಜ ಬಣ್ಣ ಬಯಲು ಮಾಡುವ ಸಂದರ್ಭ ಒದಗಿ ಬಂದಿದೆ ಎಂದರು. ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕತ್ತರಿಸುವ ಹೃದಯಹೀನ ರಾಜಕಾರಣಿ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ಧಹಸ್ತ ಸೂತ್ರಧಾರಿ ಕಾಂಗ್ರೆಸ್‌ನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ರಾಜಕೀಯ ನರಮೇಧಕ್ಕೆ ಕಾರಣ ಯಾರು ಎಂದು ಚಾಟಿ ಬೀಸಿದ್ದಾರೆ.
ಕಾಂಗ್ರೆಸ್‌ನಲ್ಲಿ ರೋಷನ್ ಬೇಗ್, ತನ್ವೀರ್ ಸೇಠ್, ರೆಹಮಾನ್ ಶರೀಫ್, ಮುಂತಾದ ನಾಯಕರನ್ನು ಮೂಲೆಗುಂಪು ಮಾಡಲು ಸಿದ್ದರಾಮಯ್ಯ ನಡೆಸಿದ ಕುತಂತ್ರಗಳು ಜನರ ಮನಸಿನಲ್ಲಿ ಹಸಿರಾಗಿದೆ. ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿ ಜಾಫ಼ರ್ ಷರೀಫ಼್ ಮೊಮ್ಮಗನನ್ನು ಮುಗಿಸಿ, ರೋಷನ್ ಬೇಗ್ ವಿರುದ್ಧ ಸೇಡು ತೀರಿಸಿಕೊಂಡಿರಿ. ಚಕ್ರ ತಿರುಗುತ್ತಿದೆ. ನಿಮ್ಮ ಅಂತ್ಯಕಾಲವು ಆರಂಭವಾಗುತ್ತಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜ ಬಣ್ಣ ಗೊತ್ತಾಗಿದೆ. ನಿಮಗೆ ಪಾಠ ಕಲಿಸುವ ಜನತಾ ಪರ್ವ ಆರಂಭವಾಗಿದೆ. ಮುಂದಿನ ಪರಿಣಾಮಗಳನ್ನು ಮತ್ತು ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡಿ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ #ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! 1/12
— H D Kumaraswamy (@hd_kumaraswamy) October 16, 2021