ಪ್ರಧಾನಿ ಮೋದಿಯವರನ್ನು ಟೀಕಿಸದಿದ್ದರೆ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದವರಿಗೆ ತಿಂದದ್ದು ಜೀರ್ಣವಾಗದು: ಆರ್. ಅಶೋಕ್

ದೇಶದ ನಾಗರಿಕರಿಗೆ 100 ಕೋಟಿ ಕೋವಿಡ್ ಲಸಿಕೆ ಪೂರೈಸಿದ್ದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ, ಆರೋಗ್ಯ ವೃಂದದವರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ.
ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ದೇಶದ ನಾಗರಿಕರಿಗೆ 100 ಕೋಟಿ ಕೋವಿಡ್ ಲಸಿಕೆ ಪೂರೈಸಿದ್ದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ, ಆರೋಗ್ಯ ವೃಂದದವರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯೇ ಭಾರತದ ಸಾಧನೆಯನ್ನು ಗುರುತಿಸಿ ಅಭಿನಂದನೆ ಸಲ್ಲಿಸಿದ ಮೇಲೆ ಇಲ್ಲಿ ಆ ಬಗ್ಗೆ ಕಮೆಂಟ್ ಮಾಡುವವರಿಗೆ, ಟೀಕಿಸುವವರಿಗೆ, ನಯಾಪೈಸೆಯ ಬೆಲೆಯಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಇಲ್ಲಿ ಸಣ್ಣಪುಟ್ಟ ಜನರು ಮಾಡುವ ಕಮೆಂಟ್ ಗಳಿಗೆ ಬೆಲೆಯಿಲ್ಲ, ಯಾವುದೇ ವಿಚಾರಕ್ಕೆ ವಿರೋಧ ಇದ್ದರೆ ಅದು ಪ್ರಚಾರಕ್ಕೆ ಹೆಚ್ಚು ಬರುತ್ತದೆ, ಸಿದ್ದರಾಮಯ್ಯನವರು ವಿರೋಧ ಮಾಡಲಿ, ಇನ್ನಷ್ಟು ಜನರಿಗೆ ಶತಕೋಟಿ ಲಸಿಕೆಯ ಸುದ್ದಿ ತಲುಪುತ್ತದೆ, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದರು. 

ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಕೆಲಸ ಮಾಡಿದ ವೈದ್ಯರು, ನರ್ಸ್ ಗಳು, ಆರೋಗ್ಯ ವಲಯ ಕಾರ್ಯಕರ್ತರು ಹಾಗೂ ಇತರ ಅಗತ್ಯ ಸೇವೆಯಲ್ಲಿ ತೊಡಗಿದ್ದವರಿಗೆ ನಾವು ಈ ಸಂದರ್ಭದಲ್ಲಿ ಧನ್ಯವಾದ ಹೇಳಬೇಕು. ಕೆಲವರಿಗೆ ಮೋದಿಯನ್ನು ಟೀಕಿಸುವುದೇ ಕೆಲಸ, ಅವರನ್ನು ಟೀಕೆ ಮಾಡದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲ. ಟೀಕೆ ಮಾಡುವುದೇ ಕಾಂಗ್ರೆಸ್ ನವರ ಅಭ್ಯಾಸ, ಅವರ ಹೈಕಮಾಂಡ್ ಕೂಡ ಮೋದಿಯನ್ನು ಟೀಕೆ ಮಾಡುತ್ತಿರಿ ಎಂದು ಹೇಳಿದೆ ಎನಿಸುತ್ತದೆ. ವಿರೋಧ ಪಕ್ಷದ ನಾಯಕರಿಗೆ ಯಾವುದನ್ನು ಟೀಕೆ ಮಾಡಬೇಕು, ಮಾಡಬಾರದು ಎಂಬ ಪರಿಜ್ಞಾನವೇ ಇಲ್ಲ ಎಂದರು.

ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದವರಿಗೆ ಸಹಾಯವಾಣಿ: ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿರುವ ರಾಜ್ಯದ ಜನರು ಅಪಾಯದಿಂದ ಹೊರಬರಲು ಸರ್ಕಾರ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿಗೆ ರಾಜ್ಯದ 10 ಕುಟುಂಬ ಸಂಪರ್ಕಿಸಿ ಕೋರಿದ್ದಾರೆ. ಉತ್ತರಾಖಂಡ ಸರ್ಕಾರ ಜೊತೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ ಎಂದರು. 

ಅವರು ಇಂದು ಬೆಂಗಳೂರಿನ ಇಂದಿರಾ ಗಾಂಧಿ ಉದ್ಯಾನವನದಲ್ಲಿ ಏರ್ಪಟ್ಟ ರಾಷ್ಟ್ರೀಯ ರಕ್ಷಣಾ ಪಡೆಯ 'ಸುದರ್ಶನ ಭಾರತ ಪರಿಕ್ರಮ'ರ್ಯಾಲಿಯಲ್ಲಿ ಭಾಗವಹಿಸಿದರು. ಈ ಕಾರು ರ್ಯಾಲಿ ದೆಹಲಿಯ ಕೆಂಪು ಕೋಟೆಯಿಂದ ಕಳೆದ ಅಕ್ಟೋಬರ್ 2ರಂದು ಹೊರಟು ಇಂದು ಬೆಂಗಳೂರು ತಲುಪಿದೆ. 

ಜನರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರನಿರ್ಮಾಣದ ಕಲ್ಪನೆಯನ್ನು ಪ್ರಚಾರ ಮಾಡುವುದು ಈ ರ್ಯಾಲಿಯ ಉದ್ದೇಶ ಎಂದು ರಾಷ್ಟ್ರೀಯ ರಕ್ಷಣಾ ಪಡೆಯ ಮಹಾ ನಿರ್ದೇಶಕ ಎಂ ಎ ಗಣಪತಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com