ಹಾನಗಲ್ ಕ್ಷೇತ್ರಕ್ಕೆ ಕೊಡುಗೆ ಕುರಿತ ಚರ್ಚೆಗೆ ಸಿದ್ಧ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು

ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಸವಾಲು ಹಾಕಿದ್ದಾರೆ.
ಹಾನಗಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
ಹಾನಗಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

ಹಾವೇರಿ: ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಸವಾಲು ಹಾಕಿದ್ದಾರೆ.

ಹಾನಗಲ್ ವಿಧಾನಸಭೆ ಕ್ಷೇತ್ರದ ನರೇಗಲ್‌ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬುದರ ಲೆಕ್ಕ ನಾನು ಕೊಡ್ತೀನಿ, ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಲೆಕ್ಕ ನೀವು ಕೊಡಿ. ಜನರಿಗೆ ಸತ್ಯ ಗೊತ್ತಾಗಲಿ" ಎಂದು ಸವಾಲು ಹಾಕಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾನಗಲ್ ಕ್ಷೇತ್ರ ಅಭಿವೃದ್ಧಿಗೆ ರೂ.2,400 ಕೋಟಿ ನೀಡಿದ್ದೆ. 2018 ರಲ್ಲಿ ಬಂದ ಪ್ರವಾಹದಿಂದಾಗಿ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದುಹೋಗಿ ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಆಗಲಿಲ್ಲ ಬೊಮ್ಮಾಯಿ ಅವರೇ?" ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

"ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದರು, ಅವರು ಅಧಿಕಾರಕ್ಕೆ ಬಂದು ಏಳು ವರ್ಷ ಆಗಿದೆಯಲ್ಲಾ ನಿಮಗೆಲ್ಲಾ ಅಚ್ಚೇ ದಿನ ಬಂತಾ?. ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎದ್ವಾತದ್ವಾ ತೆರಿಗೆ ಹೆಚ್ಚಳ ಮಾಡಿರುವ ಕಾರಣ ಇವುಗಳ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಪೆಟ್ರೋಲ್‌ನ ನೈಜ ಬೆಲೆ 45 ರೂಪಾಯಿ, ಉಳಿದ 60 ರೂಪಾಯಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ. ಇದೇನಾ ಅಚ್ಚೇ ದಿನ?

 ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ದರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದರು, ಈಗ ಹನ್ನೆರಡು ಕೋಟಿ ಉದ್ಯೋಗ ಕಿತ್ತುಕೊಂಡು ಹೋಗಿದೆ. ಮೊದಲು ಮೋದಿ ಮೋದಿ ಎಂದು ಕೂಗುತ್ತಿದ್ದವರೇ ಇಂದು ಮೋದಿ ಹೆಸರು ಕೇಳಿದರೆ ಶಾಪ ಹಾಕುತ್ತಿದ್ದಾರೆ" ಎಂದು ಆರೋಪಿಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಡಾ. ಚಿತ್ತರಂಜನ್ ಕಲಕೋಟಿಯವರು ಅಧ್ಯಕ್ಷರಾಗಿದ್ದ ವೇಳೆ ರೂ. 6 ಕೋಟಿ ಲಾಭದಲ್ಲಿದ್ದ ಸಂಗೂರು ಸಕ್ಕರೆ ಕಾರ್ಖಾನೆ, ಉದಾಸಿ ಮತ್ತು ಶಿವರಾಜ್ ಸಜ್ಜನರ ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡ ನಂತರ ನಷ್ಟದ ಹಾದಿಗೆ ಹೋಗಿದ್ದು ಏಕೆ? ಎಂಬುದನ್ನು ಸಜ್ಜನರ ಹೇಳಲಿ. ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ಲೂಟಿ ಮಾಡಿದ 33 ಲಕ್ಷ ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ಟರಾ ಶಿವರಾಜ್ ಸಜ್ಜನರ?" ಎಂದು ಪ್ರಶ್ನೆ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಬಿಜೆಪಿ ಅಧಿಕಾರಾವಧಿ ಹಾಗೂ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನ ಕುರಿತು ದಾಖಲೆಗಳನ್ನು ಬಿಡುಗಡ ಮಾಡಿ ಎಂದು ಬೊಮ್ಮಾಯಿಯವರಿಗೆ ಆಗ್ರಹಿಸಿದ್ದಾರೆ.

ರಾಜ್ಯಕ್ಕೆ ಬರಬೇಕಿದ್ದ ಅನುದಾನದ ಹಣ ಕಡಿತಗೊಂಡಿದೆ. ಕೇಂದ್ರದಲ್ಲಿ ರಾಜ್ಯದ 25 ಸಂಸದರಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹಣಕಾಸು ಬಿಡುಗಡೆ ಮಾಡಿಸುವಲ್ಲಿ ಅವರು ವಿಫಲರಾಗಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com