ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸುಮಲತಾ; ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ ಎಂದ ಸಂಸದೆ
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಗೆದ್ದು ಬಂದರೆ ಮಂಡ್ಯದಲ್ಲಿ ಮನೆ ನಿರ್ಮಿಸಿ ಅಲ್ಲಿ ವಾಸವಿರುವುದಾಗಿ, ಜನರ ಕಷ್ಟ-ಸುಖಗಳಿಗೆ ಹತ್ತಿರದಿಂದ ಸ್ಪಂದಿಸುವುದಾಗಿ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದ್ದರು.
Published: 01st September 2021 11:30 AM | Last Updated: 01st September 2021 03:08 PM | A+A A-

ಗುದ್ದಲಿ ಪೂಜೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್
ಮಂಡ್ಯ: ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಗೆದ್ದು ಬಂದರೆ ಮಂಡ್ಯದಲ್ಲಿ ಮನೆ ನಿರ್ಮಿಸಿ ಅಲ್ಲಿ ವಾಸವಿರುವುದಾಗಿ, ಜನರ ಕಷ್ಟ-ಸುಖಗಳಿಗೆ ಹತ್ತಿರದಿಂದ ಸ್ಪಂದಿಸುವುದಾಗಿ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದ್ದರು.
ಅದರಂತೆ ಇಂದು ಸೆಪ್ಟೆಂಬರ್ 1 ಬುಧವಾರ ಮಂಡ್ಯ ಜಿಲ್ಲೆಯ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಹನಕೆರೆ ಗ್ರಾಮದ 28 ಗುಂಟೆ ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ಗೌಡ, ಆಪ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಇಂದು ಬೆಳಗ್ಗೆ ನಡೆದ ಧಾರ್ಮಿಕ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ತಮ್ಮ ಮಗನ ಜೊತೆ ಸುಮಲತಾ ನೆರವೇರಿಸಿದರು.ಈ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಸುಮಲತಾ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.
ಗುದ್ದಲಿಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಜನತೆಗೆ ವಾಗ್ದಾನ ನೀಡಿದ್ದೆ. ಅವುಗಳಲ್ಲಿ ಒಂದೊಂದನ್ನೇ ನಿಭಾಯಿಸಿಕೊಂಡು ಬರುತ್ತಿದ್ದೇನೆ. ಮನೆ ನಿರ್ಮಿಸುವುದು ಕೂಡ ಅವುಗಳಲ್ಲಿ ಒಂದು. ಇಲ್ಲಿ ಮನೆ ನಿರ್ಮಿಸಿ ಜನತೆಗೆ ಹತ್ತಿರವಾಗಬೇಕೆಂದು ನನ್ನ ಉದ್ದೇಶ ಎಂದರು.
ಕಳೆದೆರಡು ವರ್ಷಗಳಿಂದ ಮಂಡ್ಯದಲ್ಲಿ ಮನೆ ನಿರ್ಮಿಸಲು ಜಾಗ ಹುಡುಕಾಡುತ್ತಿದ್ದೆ. ಮಂಡ್ಯ-ಮದ್ದೂರು ಹೆದ್ದಾರಿಯಲ್ಲಿ ಉತ್ತಮ ಪ್ರಶಸ್ತ ಜಾಗ ಸಿಕ್ಕಿತು. ಸಂತೋಷವಾಗಿದೆ, ಆದಷ್ಟು ಶೀಘ್ರ ಮನೆ ನಿರ್ಮಾಣ ಮಾಡಿ ಜನತೆಗೆ ಬಂದು ಹೋಗಲು, ನನಗೂ ಇಲ್ಲಿ ಕೆಲಸ ಮಾಡಲು ಸಹಾಯವಾಗಬೇಕೆಂದು ನನ್ನ ಆಶಯ ಎಂದರು.
ಅಂಬರೀಷ್ ಅವರು ನಿಧನರಾದಾಗ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದು ಇಲ್ಲಿನ ತಿಲಕ ಹಚ್ಚಿ ಕಳುಹಿಸಿಕೊಟ್ಟಿದ್ದೆವು. ಅದೇ ಮಂಡ್ಯದ ಮಣ್ಣಿನಲ್ಲಿ ಮನೆ ನಿರ್ಮಿಸಬೇಕೆಂಬುದು ನನ್ನ ಮತ್ತು ಮಗ ಅಭಿಷೇಕ್ ನ ಬಯಕೆ, ಅದರಂತೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಪ್ರತಿಯೊಂದಕ್ಕೂ ರಾಜಕೀಯ ಲೇಪ ಹಚ್ಚಿದರೆ ನಾನು ಏನೂ ಮಾಡಲು ಆಗುವುದಿಲ್ಲ, ರಾಜಕೀಯ ದೃಷ್ಟಿಕೋನದಿಂದ ನೋಡುವವರು ನೋಡುತ್ತಾರೆ, ತಪ್ಪೇನಿಲ್ಲ, ನೋಡಿಕೊಳ್ಳಲಿ, ನನ್ನ ಉದ್ದೇಶ ಸ್ಪಷ್ಟವಾಗಿದೆ ಎಂದರು.
ಮಗ ಅಭಿಷೇಕ್ ರಾಜಕೀಯ ಪ್ರವೇಶಿಸುತ್ತಾರೆಯೇ ಎಂದು ಕೇಳಿದ್ದಕ್ಕೆ, ಅದು ಅವನಲ್ಲಿಯೇ ಕೇಳಿ, ನಾನು ಸಂಸದೆಯಾಗುವ ಮೊದಲು ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದಷ್ಟೇ ಹೇಳಿದರು.