ಮಿಷನ್-123 ನಮ್ಮ ಮುಂದಿರುವ ಗುರಿ, ಈ ನಿಟ್ಟಿನಲ್ಲಿ ನಾಳೆಯಿಂದ 4 ದಿನ ಜೆಡಿಎಸ್ ಕಾರ್ಯಾಗಾರ: ಹೆಚ್.ಡಿ. ಕುಮಾರಸ್ವಾಮಿ
ನಾಳೆಯಿಂದ (ಸೆ.27) 4 ದಿನ ಕಾಲ ಜೆಡಿಎಸ್ನಿಂದ ಸಂಘಟನೆ ದೃಷ್ಟಿಯಿಂದ ವಿಶೇಷವಾದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
Published: 26th September 2021 10:28 AM | Last Updated: 27th September 2021 12:42 PM | A+A A-

ಹೆಚ್ ಡಿ ಕುಮಾರಸ್ವಾಮಿ
ರಾಮನಗರ: ನಾಳೆ (ಸೆ.27)ಯಿಂದ 4 ದಿನ ಕಾಲ ಜೆಡಿಎಸ್ನಿಂದ ಸಂಘಟನೆ ದೃಷ್ಟಿಯಿಂದ ವಿಶೇಷವಾದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮುಂದಿನ 17 ತಿಂಗಳು ಜೆಡಿಎಸ್ ನ್ನು ತಳಹಂತಕ್ಕೆ ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬ ದೃಷ್ಟಿಯಲ್ಲಿ ಮೊದಲ 2 ದಿನ ಶಾಸಕ ಸ್ಥಾನದ ಆಕಾಂಕ್ಷಿಗಳು, ಜೆಡಿಎಸ್ ಶಾಸಕರಿಗೆ ಕಾರ್ಯಾಗಾರ ನಡೆಯುತ್ತದೆ. ಅದರಲ್ಲಿ ರಾಜ್ಯದಲ್ಲಿನ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಯಾವ ರೀತಿ ಮುಂದಿನ ವಿಧಾಸಭೆ ಚುನಾವಣೆಗೆ ಸನ್ನದ್ಧರಾಗಬೇಕು, ನಮ್ಮ ಎದುರಾಳಿಗಳನ್ನು ಶಕ್ತಿ ಮತ್ತು ಸಂಘಟನೆಗೆ ಪರ್ಯಾಯವಾಗಿ ನಾವು ಯಾವ ರೀತಿ ಮುನ್ನಡೆಯಬೇಕು ಎಂದು ತರಬೇತಿ ನೀಡುವ ಕಾರ್ಯಕ್ರಮವಿರುತ್ತದೆ ಎಂದರು.
ಮೂರನೇ ದಿನ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಬೂತ್ ಮಟ್ಟದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಮಹಿಳಾ ಸಂಘಟನೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ, ಆಯಾ ಕ್ಷೇತ್ರದಲ್ಲಿ ಮಹಿಳೆಯರನ್ನು ಭೇಟಿ ಮಾಡಿ ಅವರ ಕಷ್ಟಗಳು, ಅಗತ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪಕ್ಷ ಸಂಘಟನೆಗೆ ಚಾಲನೆ ನೀಡುತ್ತಾರೆ. ದೇವೇಗೌಡರು ತಮ್ಮ ರಾಜಕೀಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ನಂತರ ಎರಡು ದಿನಗಳಲ್ಲಿ 7 ಸೆಷನ್ನಲ್ಲಿ ಕಾರ್ಯಾಗಾರ ನಡೆಯುತ್ತದೆ ಎಂದು ಹೇಳಿಕೆ ನೀಡಿದ ಕುಮಾರಸ್ವಾಮಿ, ಯಾವುದೇ ಪಕ್ಷದ ಜೊತೆ ಜೆಡಿಎಸ್ ಹೊಂದಾಣಿಕೆ ಇಲ್ಲ. ಸ್ವತಂತ್ರವಾಗಿ ಅಧಿಕಾರ ಪಡೆಯುವುದೇ ಜೆಡಿಎಸ್ ಪಕ್ಷದ ಗುರಿಎಂದರು.
ರಾಮನಗರ ತಾಲೂಕಿನ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಈ ತರಬೇತಿ ನಡೆಯುತ್ತಿದೆ. ಪಕ್ಷದ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಹೊಟೇಲ್ ಬೇಡ ಎಂದು ತೋಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಜೆಡಿಎಸ್ ಶಾಸಕರು, ಮಾಜಿ ಶಾಸಕರು, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಮಹಿಳಾ ಮುಖಂಡರು, ಜೆಡಿಎಸ್ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು. ನುರಿತರು ತರಬೇತಿ ನೀಡಲಿದ್ದಾರೆ ಎಂದರು.
ಯಾವುದೇ ಪಕ್ಷ ಜೊತೆ ಹೊಂದಾಣಿಕೆ ಇಲ್ಲ: ಜೆಡಿಎಸ್ ಮಿಷನ್ 123 ಗುರಿ ಮುಟ್ಟಲು ತರಬೇತಿ ನಡೆಯುತ್ತಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಸ್ವತಂತ್ರವಾಗಿ ಅಧಿಕಾರ ಪಡೆಯುವುದೇ ನಮ್ಮ ಗುರಿಯಾಗಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ನ ಹಲವಾರು ಬದ್ಧತೆಗಳನ್ನು ಈಡೇರಿಸಲು ಸ್ವತಂತ್ರವಾಗಿ ಜನತೆಯಿಂದ ಪಡೆಯಲು ಒಂದೂವರೆ ವರ್ಷದ ಹಿಂದೆಯೇ ನಿರ್ಧಾರ ಮಾಡಿದ್ದೇವೆ ಎಂದರು.