ಯಾವುದೇ ಪಕ್ಷವನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಯಾವುದೇ ಪಕ್ಷವನ್ನೂ ಒಡೆಯುವ ಕೆಲಸವನ್ನು ಮಾಡುವುದಿಲ್ಲ. ಆದರೆ, ಯಾವುದೇ ನಾಯಕ ಪಕ್ಷಕ್ಕೆ ಬರಲು ಇಚ್ಛಿಸಿದರೆ, ಅವರನ್ನು ಸ್ವಾಗತಿಸುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
Published: 27th September 2021 08:05 AM | Last Updated: 27th September 2021 12:43 PM | A+A A-

ಡಿಕೆ. ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಯಾವುದೇ ಪಕ್ಷವನ್ನೂ ಒಡೆಯುವ ಕೆಲಸವನ್ನು ಮಾಡುವುದಿಲ್ಲ. ಆದರೆ, ಯಾವುದೇ ನಾಯಕ ಪಕ್ಷಕ್ಕೆ ಬರಲು ಇಚ್ಛಿಸಿದರೆ, ಅವರನ್ನು ಸ್ವಾಗತಿಸುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಸಂಜಯನಗರದಲ್ಲಿ ರೇಷನ್ ಕಿಟ್ಸ್ ವಿತರಣೆ ಕಾರ್ಯಕ್ರಮದಲ್ಲಿ 20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲುಸಿದ್ಧರಾಗಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಹೇಳಿಕೆ ಕುರಿತು ಮಾತನಾಡಿದ್ದಾರೆ.
ಕೇವಲ 20 ಶಾಸಕರಲ್ಲ 40 ಶಾಸಕರನ್ನು ಕರೆದುಕೊಂಡರೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಮಾಡಲು ಸಾಧ್ಯವಿಲ್ಲ. 2023ಕ್ಕೆ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆಂದು ಹೇಳಿದ್ದಾರೆ.
ಇದೇ ವೇಳೆ ರೈತರ ಭಾರತ್ ಬಂದ್ ಕರೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಮತ್ತು ರಾಜ್ಯದಲ್ಲಿರುವ ರೈತರು ಶಾಂತಿಯುತವಾಗಿ ಬದುಕಲು ಬಿಡುತ್ತಿಲ್ಲ. ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸಂಸತ್ ಹಾಗೂ ಶಾಸನ ಸಭೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಬದುಕಲು ಬಿಡುತ್ತಿಲ್ಲ. ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಬೆಂಬಲ ಬೆಲೆ ಇಲ್ಲ. ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಬಂಡವಾಳ ಶಾಯಿಗಳಿಗೆ ಕೃಷಿ ಭೂಮಿ ಹಾಗೂ ರೈತರ ಬದುಕನ್ನೇ ಧಾರೆಯೆರೆಯುವ ಮೂಲಕ ರೈತರನ್ನು ಮತ್ತಷ್ಟು ಘಾಸಿಗೊಳಿಸುತ್ತಿದ್ದಾರೆ. ಕೃಷಿ ಕಾಯ್ದೆ ಬಗ್ಗೆ ದೇಶಾದ್ಯಂತ ವಿರೋಧವಿದ್ದರೂ, ಸರ್ಕಾರ ಹಠಮಾರಿತನ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ. ಪಕ್ಷವು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.