'ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು, ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು'

ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿದ್ದ ಬಗ್ಗೆ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿದ್ದ ಬಗ್ಗೆ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಸಿದ್ದರಾಮಯ್ಯ ಅವರು ಸತ್ಯವನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

'ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು ಎಂಬುದನ್ನು ಜನ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ. ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದ ಸಿದ್ದರಾಮಯ್ಯ, ಈಗ ಅದೇ ಬಲದಿಂದ ಕಾಂಗ್ರೆಸ್ ಪಕ್ಷವನ್ನೇ ನುಂಗುತ್ತಿದ್ದಾರೆ. ಆ ಪಕ್ಷದ ದಿಗ್ಗಜ ನಾಯಕರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

ಅಕ್ಕಿಭಾಗ್ಯದ ಅಸಲಿಯತ್ತು ಏನು ಎಂಬುದನ್ನು ಈಗಾಗಲೇ ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಅದಾದ ಮೇಲೂ ನಿಮ್ಮ ಸುಳ್ಳಿನ ಜಪ ಮುಂದುವರಿದಿದೆ. ಸತ್ಯ ಹೇಳಲು ಹಿಂಜರಿಕೆ- ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ? 5 ಕೆಜಿ ಅಕ್ಕಿ ಅಸಲಿಯೆತ್ತಿನ ಬಗ್ಗೆ ಹೇಳಲು ಅಂಜಿಕೆ ಏಕೆ ಸಿದ್ದರಾಮಯ್ಯನವರೇ? ಎಂದು ಟ್ವೀಟ್ ಮಾಡಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಅದಕ್ಕೆ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ತಾವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ? ಐದು ಕೆಜಿಗೋ ಅಥವಾ ಏಳು ಕೆಜಿಗೋ? ಸತ್ಯವನ್ನು ಕಕ್ಕಲು ಕಷ್ಷವೇಕೆ? ನಾಲಗೆ ತಡವರಿಸುತ್ತಿದೆಯಾ ಪ್ರತಿಪಕ್ಷ ನಾಯಕರೇ? ಎಂದು ಕೇಳಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ಐದು ಕೆಜಿ ಅಕ್ಕಿ ನೀಡಲಾಯಿತು, ನಿಜ. ಇದ್ದಕ್ಕಿದ್ದಂತೆ 7 ಕೆಜಿ ಕೊಡಿ ಎಂದು ಬೊಬ್ಬೆ ಹೊಡೆದ ಸ್ವತಃ ನೀವೇ ಬಜೆಟ್​ನಲ್ಲಿ ಹಣ ಮೀಸಲು ಇಟ್ಟಿದ್ದದ್ದು 5 ಕೆಜಿಗೆ ಮಾತ್ರ. ಹೊರಗೆ ಮಾತ್ರ ಹೆಚ್.ಡಿ. ಕುಮಾರಸ್ವಾಮಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದೀರಿ. ಉಳಿದ ಎರಡು ಕೆಜಿ ಅಕ್ಕಿಗೆ ಹಣ ಎಲ್ಲಿತ್ತು? ಸ್ವಲ್ಪವಾದರೂ ಪಾಪಪ್ರಜ್ಞೆ ಇಲ್ಲವೆ ನಿಮಗೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಕೇವಲ ಚುನಾವಣೆಯಲ್ಲಿ ಮತ ಪಡೆಯುವ ದುರುದ್ದೇಶದಿಂದ ನೀವು ಜನರು ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುತ್ತಿದ್ದರಿ. ಆದರೆ ಉಳಿದ ಎರಡು ಕೆಜಿ ಅಕ್ಕಿಗೆ ಹಣ ಹೊಂದಿಸಲು ಸಮ್ಮಿಶ್ರ ಸರಕಾರದಲ್ಲಿ ನಾವು ಪಟ್ಟ ಕಷ್ಟ ನಿಮಗೆ ಗೊತ್ತಿಲ್ಲವೇ? ಸದನದಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಐದು ಕೆಜಿಗೆ ಹಣ ಮೀಸಲಿಟ್ಟಿದ್ದ ಅಕ್ಕಿಗಾಗಿ ಮಿಡಿದ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಸುಳ್ಳಿನ ಶೂರ ಸಿದ್ದರಾಮಯ್ಯ ಇನ್ನಾದರೂ ನಿಮ್ಮ ಸುಳ್ಳಿನ ʼಸಿದ್ದಕಲೆʼಗೆ ಕೊನೆ ಹಾಡಿ ಎಂದು ಹೇಳಿದ್ದಾರೆ.

'ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು’ ನನ್ನನ್ನು ಮುಖ್ಯಮಂತ್ರಿ ಮಾಡಿ ಕೊನೆಗೆ ಕೈಕೊಟ್ಟು ಆ ಸರ್ಕಾರದ ಪತನಕ್ಕೆ ʼಕಾರಣಪುರುಷರುʼ ಯಾರು? ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದಿದ್ದಾರೆ. 

ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿ, ಅವರಿಗೆ ಕೈಕೊಟ್ಟವರು ಯಾರು ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರೇ ಸುಮ್ಮನೆ ನಮ್ಮನ್ನು ಕೆಣಕಬೇಡಿ. ಜೆಡಿಎಸ್ ಚಿಕ್ಕ ಪಕ್ಷವಿರಬಹುದು, ಅದರ ಶಕ್ತಿಯನ್ನು ಕಡೆಗಣಿಸಬೇಡಿ. ಕರ್ನಾಟಕ ರಾಜಕಾರಣದಲ್ಲಿ ಪರಾವಲಂಬಿ ಸಸ್ಯ ನೀವು. ಪಕ್ಷಗಳನ್ನು ಒಡೆಯುವ ನಿಮ್ಮ ‘ಸಿದ್ದಕಲೆʼ ರಾಜ್ಯಕ್ಕೆ ಹೊಸತೇನಲ್ಲ‘ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com