ಸಿಂದಗಿ-ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ: ಕಾರ್ಯತಂತ್ರ ರೂಪಿಸುವಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮಗ್ನ!

ಅಕ್ಟೋಬರ್ 30ರಂದು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಹವಣಿಕೆಯಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ಟೋಬರ್ 30ರಂದು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಹವಣಿಕೆಯಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್, ಎರಡೂ ಕ್ಷೇತ್ರಗಳ ಎಲ್ಲಾ ಬೂತ್ ಗಳನ್ನು ನಾವು ಸಕ್ರಿಯಗೊಳಿಸಿದ್ದೇವೆ. ಬೂತ್ ಮಟ್ಟದ ಅಧ್ಯಕ್ಷರುಗಳ ಹೆಸರುಗಳನ್ನು ನಾವು ಗುರುತಿಸಿದ್ದು ಅವರಿಗೆ ನೇಮ್ ಪ್ಲೇಟ್ ಗಳನ್ನು ನೀಡಲಾಗಿದೆ. ಅವರ ಮನೆಗಳ ಹೊರಗೆ ಬೋರ್ಡ್ ಗಳನ್ನು ಪ್ರದರ್ಶಿಸಲಾಗಿದೆ ಎಂದರು.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ಮುಗಿದಿದೆ. ಕ್ಷೇತ್ರವಾರು ಮಟ್ಟದಲ್ಲಿ ಮತ್ತು ಬೆಂಗಳೂರಿನಲ್ಲಿ ಸಹ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಭೆಗಳನ್ನು ನಡೆಸಲಾಗುವುದು. ಜವಾಬ್ದಾರಿಯ ಕೆಲಸಗಳನ್ನು ನೀಡಿದ ನಂತರ ಚುನಾವಣಾ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಬಿಜೆಪಿಯಿಂದ ಕಳೆದ ಬಾರಿ ಸೋತ ರಮೇಶ್ ಬುನ್ಸೂರು ಅವರನ್ನು ಸಿಂದಗಿಯಲ್ಲಿ ಕಣಕ್ಕಿಳಿಸಲು ಮತ್ತು ಹಾನಗಲ್ ನಲ್ಲಿ ಹೊಸ ಅಭ್ಯರ್ಥಿಗೆ ಈ ಬಾರಿ ಮಣೆ ಹಾಕುವಂತಿದೆ.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಿನ್ನೆ ಸಭೆ ನಡೆಸಿ ಎರಡೂ ಕ್ಷೇತ್ರಗಳಲ್ಲಿ ಕಾರ್ಯತಂತ್ರ ರೂಪಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇಂದು ಮತ್ತು ನಾಳೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಗುವುದು ಎಂದರು.

ಮಸ್ಕಿ ಕ್ಷೇತ್ರದ ಇತ್ತೀಚಿನ ಉಪ ಚುನಾವಣೆ ನಂತರ ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಮತ್ತು ಹುಮ್ಮಸ್ಸಿನಲ್ಲಿದೆ. ಕೋವಿಡ್-19 ನಿರ್ವಹಣೆ ಮತ್ತು ಇತರ ವಿಷಯಗಳಲ್ಲಿ, ಭ್ರಷ್ಟಾಚಾರದಲ್ಲಿ ಸರ್ಕಾರದ ವೈಫಲ್ಯ ಮತ್ತು ಅವ್ಯವಹಾರಗಳನ್ನು ಎತ್ತಿ ತೋರಿಸಿ ಮತದಾರರ ಮುಂದೆ ಮತ ಕೇಳಲಿದ್ದು ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಇಂದು ಹಾನಗಲ್ ನಲ್ಲಿ ನಡೆಯುವ ಕಾರ್ಯತಂತ್ರ ಸಭೆಯಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಇತರ ನಾಯಕರು ಉಪಸ್ಥಿತರಿರಲಿದ್ದು ಸಿಂದಗಿಯಲ್ಲಿ ನಾಳೆ ಸಭೆ ನಡೆಯಲಿದೆ. ಅಲ್ಲಿ ಅವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಿದ್ದಾರೆ ಎಂದರು.

 ಸಿಂದಗಿ ಅಭ್ಯರ್ಥಿ ಅಶೋಕ್ ಮನಗುಳಿ ಬಗ್ಗೆ ಕಾಂಗ್ರೆಸ್ ನಲ್ಲಿ ಇನ್ನೂ ಸ್ಪಷ್ಟತೆಯಿಲ್ಲ. ಇಂದಿನ ಸಭೆಯ ನಂತರ ಪಕ್ಷ ಹಾನಗಲ್ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದು ಕೇಂದ್ರ ನಾಯಕರ ಅನುಮೋದನೆಯನ್ನು ಪಡೆಯಲಿದೆ.

ಈ ಮಧ್ಯೆ, ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಹಾನಗಲ್ ಅಭ್ಯರ್ಥಿ ಬಗ್ಗೆ ಪಕ್ಷದ ನಾಯಕರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿಂದಗಿ ಕ್ಷೇತ್ರಕ್ಕೆ ನಿಯಾಜ್ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದ್ದು ಅವರು ಈಗಾಗಲೇ ಕ್ಷೇತ್ರದ 150 ಗ್ರಾಮಗಳಲ್ಲಿ 800 ಸಭೆಗಳನ್ನು ನಡೆಸಿದ್ದಾರೆ. ಬೂತ್ ಮಟ್ಟದಿಂದ ನಾಯಕರಿಗೆ ಹೆಚ್ ಡಿ ಕುಮಾರಸ್ವಾಮಿಯವರು ಜವಾಬ್ದಾರಿ ವಹಿಸಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com