ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೇವೆ, ನಾಯಕತ್ವವನ್ನು ಹೈಕಮಾಂಡ್ ನಿರ್ಧರಿಸುತ್ತದೆ, ಭಿನ್ನಾಭಿಪ್ರಾಯವಿಲ್ಲ: ಕೆ ಸಿ ವೇಣುಗೋಪಾಲ್

ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಬಣ ಬಡಿದಾಟವಾಗುತ್ತಿರುವ ಮಧ್ಯೆ ಸಿದ್ದರಾಮೋತ್ಸವಕ್ಕೆ ಬಂದಿರುವ ಕಾಂಗ್ರೆಸ್ ನ ಕೇಂದ್ರ ನಾಯಕರು ಅಧಿಕಾರಕ್ಕಾಗಿ ಬಡಿದಾಡುತ್ತಿರುವ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ರಾಹುಲ್ ಗಾಂದಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜಕೀಯ ವ್ಯವಹಾರಗಳ‌‌ ಸಮಿತಿ ಸಭೆ
ಹುಬ್ಬಳ್ಳಿಯಲ್ಲಿ ನಿನ್ನೆ ರಾಹುಲ್ ಗಾಂದಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜಕೀಯ ವ್ಯವಹಾರಗಳ‌‌ ಸಮಿತಿ ಸಭೆ
Updated on

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಬಣ ಬಡಿದಾಟವಾಗುತ್ತಿರುವ ಮಧ್ಯೆ ಸಿದ್ದರಾಮೋತ್ಸವಕ್ಕೆ ಬಂದಿರುವ ಕಾಂಗ್ರೆಸ್ ನ ಕೇಂದ್ರ ನಾಯಕರು ಅಧಿಕಾರಕ್ಕಾಗಿ ಬಡಿದಾಡುತ್ತಿರುವ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

 ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯ ಪ್ರಥಮ ಸಭೆ ನಡೆದಿತ್ತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಲು ಈಗಾಗಲೇ ರಾಜ್ಯದ ನಾಯಕರುಗಳಿಗೆ ಕರೆಕೊಟ್ಟಿದ್ದು, ಶೇ.40ರಷ್ಟು ಭ್ರಷ್ಟಾಚಾರ, ವ್ಯಾಪಕವಾಗಿರುವ ನಿರುದ್ಯೋಗ, ಬೆಲೆ ಏರಿಕೆ ಸೇರಿ ಇನ್ನಿತರ ವಿಷಯ ಕುರಿತು ಬಿಜೆಪಿ ವಿರುದ್ಧ ಜನತೆಗೆ ಮನಮುಟ್ಟುವಂತೆ ತಿಳಿಸಲು ಸೂಚನೆ ನೀಡಲಾಗಿದೆ ಎಂದರು.

ರಾಜ್ಯವನ್ನು ಲೂಟಿ ಮಾಡುವುದರಲ್ಲಿ ಬಿಜೆಪಿ ಸರ್ಕಾರ ನಿರತವಾಗಿದ್ದು, ಇದನ್ನು ಸ್ವತಃ ಬಿಜೆಪಿಯೇ ಸಾಬೀತು ಪಡಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಸಾಮಾನ್ಯ ಜನರ ಬೆಂಬಲವಿದ್ದು ಅವರ ಬೆಂಬಲದಿಂದಲೇ ನಾವು ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲಿದ್ದೇವೆ ಎಂದರು. 

ನಾಯಕತ್ವ ಹೈಕಮಾಂಡ್ ನಿರ್ಧರಿಸುತ್ತದೆ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದು ರಾಜ್ಯ ಕಾಂಗ್ರೆಸ್‌ನ ಮುಂದಿರುವ ಸದ್ಯದ ಗುರಿ.ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮಲ್ಲಿ ನಾಯಕತ್ವದ ಕುರಿತು ಗೊಂದಲವಿಲ್ಲ. ವೈಯಕ್ತಿಕ ಹೇಳಿಕೆಗಳನ್ನು ಪಕ್ಷ ಸಹಿಸಿಕೊಳ್ಳುವುದಿಲ್ಲ. ಚುನಾವಣೆ ನಂತರವೇ ಹೈಕಮಾಂಡ್ ನಾಯಕತ್ವವನ್ನು ನಿರ್ಧಾರ ಮಾಡಲಿದೆ ಎಂದು ಸ್ಪಷ್ಟ ಸಂದೇಶ ನೀಡಿದರು.

ಮುಂದಿನ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಿಸುವ ವಿಚಾರದಲ್ಲಿ, ಅಭ್ಯರ್ಥಿಗಳನ್ನು ಘೋಷಿಸುವಲ್ಲಿ, ಚುನಾವಣೆಯನ್ನು ಗೆಲ್ಲುವಲ್ಲಿ ಸಂಪೂರ್ಣವಾಗಿ ಸಜ್ಜಾಗಿದ್ದೇವೆ. ಕಾಂಗ್ರೆಸ್ ನಾಯಕರು ಆಂತರಿಕವಾಗಿ ಹಾಗೂ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಂತಿಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಒಂದಾಗಿ ಹೋರಾಟ ಮಾಡಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕರ್ನಾಟಕದಲ್ಲಿ ಅಧಿಕಾರವನ್ನು ಮತ್ತೆ ತೆಕ್ಕೆಗೆ ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದು ಕೆ.ಸಿ.ವೇಣುಗೋಪಾಲ ಖಡಕ್ ಆಗಿಯೇ ರಾಜ್ಯ ನಾಯಕರಿಗೆ ಸಂದೇಶ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com