ಕೇಂದ್ರ, ರಾಜ್ಯದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ಸಂವಿಧಾನ ಬದಲಿಸಲು ಜನ ಬಿಡಲ್ಲ- ಸಿದ್ದು ಗುಡುಗು
ದಾವಣಗೆರೆ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ನಡೆದ ತಮ್ಮ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಾಗಿದೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಗಿಸುವ ನಿಮ್ಮ ಕನಸು ನನಸು ಆಗಲ್ಲ, ದೇಶದ ಸಂವಿಧಾನ ಬದಲಿಸಲು ಈ ದೇಶದ ಜನ ಬಿಡಲ್ಲ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಗುಡುಗಿದರು.
2013ರಲ್ಲಿ ತಾನು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾರಣ. ಪ್ರಧಾನಿ ಹುದ್ದೆಯನ್ನೇ ನಿರಾಕರಿಸಿದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅಕ್ರಮ ಲೇವಾದೇವಿ ನಡೆಯದಿದ್ದರೂ ಇಡಿಯಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸರಣಿ ಕೊಲೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಪ್ರವೀಣ್ ನಿವಾಸಕ್ಕೆ ಪರಿಹಾರ ನೀಡಿ, ಮಸೂದ್, ಫಾಜಿಲ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬೊಮ್ಮಾಯಿ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿನಾ? ನೀವು ಸಿಎಂ ಆಗಿ ಮುಂದುವರೆಯಲು ಯಾವ ನೈತಿಕತೆ ಇದೆ. ರಾಜ್ಯ ಆಳುವುದಕ್ಕೆ ನಾಲಾಯಕ್, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.
ಜನರ ಬೆಂಬಲವಿಲ್ಲದೆ ಯಾರೊಬ್ಬರು ಕೂಡಾ ಧೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ನಾನು 44 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಶಾಸಕ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಈ ಅವಕಾಶ ಕಲ್ಪಿಸಿದ್ದಕ್ಕೆ ಇಡೀ ಕರ್ನಾಟಕಕ್ಕೆ ಧನ್ಯವಾದ ಸಲಿಸುತ್ತೇನೆ. ಎಲ್ಲಿಯವರೆಗೂ ಶಕ್ತಿಯಿರುತ್ತದೆಯೋ ಅಲ್ಲಿಯವರೆಗೂ ರಾಜಕೀಯ ಮಾಡುತ್ತೇನೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ