ಲಿಂಗಾಯತ ಸಮುದಾಯದವರು ಮೂರ್ಖರಲ್ಲ; ಯಡಿಯೂರಪ್ಪ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಲಿ: ಕಾಂಗ್ರೆಸ್ ಸವಾಲು
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಹಿರಿಯರು, ಅವರಿಗೆ ಒಳ್ಳೆಯದಾಗಲಿ ಅಂತಾ ಆಶಿಸುತ್ತೇನೆ. 75 ವರ್ಷವಾದ ಕಾರಣ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದರು.ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದಾರೆ. ಅವರು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ, ಸಿಎಂ ಆಗುವ ಅವಕಾಶ ಇಲ್ಲ. ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಬಿಜೆಪಿಗೆ ಯಡಿಯೂರಪ್ಪ ಮೇಲೆ ವಿಶೇಷ, ಇನ್ನಿಲ್ಲದ ಪ್ರೀತಿ ಬಂದಿದೆ ಎಂದರು.
ಸಿದ್ದರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ. ಐಸಿಯುನಲ್ಲಿ ಬಿಜೆಪಿ ಪಕ್ಷ ಇರುವ ಕಾರಣ ಪ್ರೀತಿ ತೋರಿಸಿದ್ದಾರೆ ಅಷ್ಟೇ. ಮುಂದಿನ ಚುನಾವಣೆಗೆ ಅಸ್ತಿತ್ವ ಉಳಿಸಿಕೊಳ್ಳಲು ನೇಮಕ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮಹತ್ವ ಇವಾಗ ಬಿಜೆಪಿ ಹೈಕಮಾಂಡ್ ನಾಯಕರಿಗೆ ಗೊತ್ತಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರ ಮುಂದೆ ಇಡುತ್ತೇವೆ.
ನಾನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ. ಹಾಗಾಗಿ ಪಕ್ಷದ ಪರವಾಗಿ ಪ್ರಚಾರ ಮಾಡುವುದು ನನ್ನ ಜವಾಬ್ದಾರಿ. ಕಾಂಗ್ರೆಸ್ ಸರ್ಕಾರದ ಸಾಧನೆ ಜೊತೆಗೆ ಬಿಜೆಪಿ ಸರ್ಕಾರದ ವೈಫಲ್ಯ ಜನರ ಮುಂದೆ ಇಡಬೇಕು ಎಂದರು.
ನಾನು ಲಿಂಗಾಯತ ಮತ ಸೆಳೆಯಲು ಪ್ರವಾಸ ಮಾಡುತ್ತಿಲ್ಲ. ನಮಗೆ ಎಲ್ಲಾ ಜಾತಿಗಳೂ ಬಹಳ ಮುಖ್ಯ. ಎಲ್ಲಾ ಸಮುದಾಯದ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ ಎಂದರು.
ಲಿಂಗಾಯತ ಸಮುದಾಯದ ಜನರು ಅಷ್ಟೇನೂ ಮೂರ್ಖರಲ್ಲ, ಯಡಿಯೂರಪ್ಪ ಬಗ್ಗೆ ಗೌರವ ಇದ್ದಿದ್ರೆ ಸಿಎಂ ಸ್ಥಾನದಿಂದ ಯಾಕೆ ಕೆಳಗೆ ಇಳಿಸಿದರು? ಪ್ರೀತಿ ಇದ್ರೆ ಅವರನ್ನ ಸಿಎಂ ಅಂತಾ ಘೋಷಿಸಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ