ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ರೊಚ್ಚಿಗೆದ್ದಿರುವ ರೆಡ್ಡಿ ಮನವೊಲಿಸಲು ಶ್ರೀರಾಮುಲು ಸರ್ಕಸ್

ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ, ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು
Updated on

ಬಳ್ಳಾರಿ: ಮೂಲೆಗುಂಪು ಮಾಡಿದ ಬಿಜೆಪಿಯ ವಿರುದ್ಧ ಸಿಟ್ಟಿಗೆದ್ದು ಹೊಸ ಪಕ್ಷ ಕಟ್ಟಲು ಹೊರಟಿರುವ ಜನಾರ್ದನ ರೆಡ್ಡಿ ಅವರ ಮನವೊಲಿಸಲು ಶ್ರೀರಾಮುಲು ಮುಂದಾಗಿದ್ದಾರೆ. ಜನಾರ್ದನ ರೆಡ್ಡಿ ರೆಬಲ್ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಸಚಿವ ಶ್ರೀರಾಮುಲು ಅವರು ಮತ್ತೆ ಸ್ನೇಹದ ಮಂತ್ರ ಜಪಿಸಿದ್ದಾರೆ. ಜನಾರ್ದನ ರೆಡ್ಡಿ ನನ್ನ ಆಪ್ತಸ್ನೇಹಿತ, ಸ್ನೇಹಕ್ಕಾಗಿ ಜೀವ ಕೊಡಲು ನಾನು ಸಿದ್ಧ ಎಂದು ಶ್ರೀರಾಮುಲು ತಿಳಿಸಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅಸಮಾಧಾನವನ್ನು ಮನವೊಲಿಸಲು ಸಿದ್ಧನಿದ್ದೇನೆ. ಸ್ನೇಹ ಅಂದ್ರೆ ಜನಾರ್ದನ‌ ರೆಡ್ಡಿ ಮತ್ತು ರಾಮುಲು ಎಂದು ಎಲ್ಲರೂ ಮಾತಾಡ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಈ ರಾಮುಲು. ಹೀಗಾಗಿ ನನ್ನ ಪ್ರಾಣಸ್ನೇಹಿತನಿಂದ ದೂರ ಆಗುವ ಮಾತೇ ಇಲ್ಲ ಎಂದು ಹೇಳಿದರು.

ರೆಡ್ಡಿ ಈ ಬಾರಿ ತಮ್ಮ ಕೇಂದ್ರ ಸ್ಥಾನವನ್ನು ಗಂಗಾವತಿಗೆ ಶಿಫ್ಟ್‌ ಮಾಡಲು ನಿರ್ಧರಿಸಿದ್ದಾರೆ. ತಾನಿನ್ನೂ ಬಿಜೆಪಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರೂ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯದಿಂದ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದ ಶ್ರೀರಾಮುಲು ಸ್ನೇಹ ಮಂತ್ರ ಪಠಿಸಿದ್ದಾರೆ.

ಜನಾರ್ದನ ರೆಡ್ಡಿ ಅವರಿಗೆ ಪಕ್ಷದಲ್ಲಿ ಕಡೆಗಣಿಸಿದ್ದರ ಬಗ್ಗೆ ಬೇಸರವಾಗಿರುವುದು ನಿಜ. ಈ ವಿಚಾರವನ್ನು ನಾನು ಹಿರಿಯ ನಾಯಕರಿಗೆ ಹೇಳಿದ್ದೇನೆ ಎಂದು ಹೇಳಿಕೊಂಡಿದ್ದ ಶ್ರೀರಾಮುಲು ಈಗ ಜನಾರ್ದನ ರೆಡ್ಡಿ ಮನವೊಲಿಸಲು ರೆಡಿ, ಸ್ನೇಹಕ್ಕಾಗಿ ಜೀವ ಕೊಡಲೂ ಸಿದ್ಧ ಎಂದು ಹೇಳಿದ್ದಾರೆ.

ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ, ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ. ರಾಜಕಾರಣ ಬಂದಾಗ ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳನ್ನು ಕೇಳುತ್ತಾ ಇದ್ದೇವೆ. ನಾನಿನ್ನೂ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಜನಾರ್ದನ ರೆಡ್ಡಿ ಸದ್ಯದ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ನನಗೆ ಸಿಕ್ಕ ಬಳಿಕ ಅವರನ್ನು ಕೂರಿಸಿಕೊಂಡು ಮಾತಾಡುವೆ ಎಂದು ರಾಮುಲು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com