ರಾಜ್ಯ ಚುನಾವಣೆ-2023: ಜೆಡಿಎಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 
ಹೆಚ್ ಡಿ ಕುಮಾರಸ್ವಾಮಿ-ನಿಖಿಲ್ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ-ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 

ಪಟ್ಟಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಲಿದ್ದಾರೆ.
 
ಪಕ್ಷದ ಕಚೇರಿಯಲ್ಲಿ ಹೆಚ್ ಡಿಕೆ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಮ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಮಾಜಿ ಸಚಿವ ಜಿಟಿ ದೇವೇಗೌಡಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದರೆ, ಅವರ ಪುತ್ರ ಹರೀಶ್ ಗೌಡಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. 

ರಾಮನಗರ ಕ್ಷೇತ್ರವನ್ನು ಅನಿತಾ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದರೆ, ಈ ಕ್ಷೇತ್ರವನ್ನು ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿಗೆ ಈ ಹಿಂದೆ ಬಿಟ್ಟುಕೊಟ್ಟಿದ್ದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇದ್ದಾಗ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಗ ಯಾವುದೇ ಅಭ್ಯರ್ಥಿಯನ್ನೂ ಹಾಕದೇ ಇದ್ದದ್ದು ಅನಿತಾ ಕುಮಾರಸ್ವಾಮಿ ಅವರ ಗೆಲುವಿಕೆ ಸಹಕಾರಿಯಾಗಿತ್ತು. ಅಷ್ಟೇ ಅಲ್ಲದೇ ಕಾಂಗ್ರೆಸ್ ನ ಮೂಲದವರಾಗಿದ್ದ ಎಲ್ ಚಂದ್ರಶೇಖರ್ ಬಿಜೆಪಿ ಸೇರ್ಪಡೆಗೊಂಡು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ್ದರು. ಪರಿಣಾಮ ಅಭ್ಯರ್ಥಿಯಾಗಿದ್ದ ಅನಿತಾ ಕುಮಾರಸ್ವಾಮಿ 1,09,137 ಮತಗಳಿಂದ ಗೆದ್ದಿದ್ದರು.

2023 ರಲ್ಲಿ ರಾಮನಗರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಇಕ್ಬಾಲ್ ಹುಸೇನ್ ಹೆಚ್ಎ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
 
ಹಾಲಿ ಶಾಸಕರಿಗೆ ಟಿಕೆಟ್, ಬಂಡಾಯ ಶಾಸಕರ ಹೆಸರು ಕೈಬಿಟ್ಟ ಜೆಡಿಎಸ್ 

ಮೊದಲ ಪಟ್ಟಿಯಲ್ಲಿ ಜೆಡಿಎಸ್ ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಿದೆ. ಆದರೆ ಬಂಡಾಯ ಸಾರಿರುವ ಇಬ್ಬರು ಹಾಲಿ ಶಾಸಕರು- ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ, ಅರಸಿಕೆರೆ ಶಾಸಕ ಕೆಎಂ ಶಿವಲಿಂಗೇಗೌಡರ ಹೆಸರನ್ನು ಮೊದಲ ಪಟ್ಟಿಯಿಂದ ಕೈಬಿಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com