ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದವರಿಗೆ ನೋಟಿಸ್: ರಾಜ್ಯ ನಾಯಕರಿಗೆ ಕಾಂಗ್ರೆಸ್ ಎಚ್ಚರಿಕೆ

ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಘೋಷಣೆ ಮಾಡಿದರೆ ಅಂತಹವರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ರಾಜ್ಯ ನಾಯಕರಿಗೆ ಕಾಂಗ್ರೆಸ್ ಖಡಕ್ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಘೋಷಣೆ ಮಾಡಿದರೆ ಅಂತಹವರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ರಾಜ್ಯ ನಾಯಕರಿಗೆ ಕಾಂಗ್ರೆಸ್ ಖಡಕ್ ಎಚ್ಚರಿಕೆ ನೀಡಿದೆ.

ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ರಾತ್ರಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.

ದೇಶದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧೀಜಿಯವರು ಆಯ್ಕೆಯಾದ ಬೆಳಗಾವಿಯಲ್ಲಿ ಮೊದಲ ಚುನಾವಣಾ ಸಮಿತಿ ಸಭೆ ನಡೆಸಲಾಗಿದೆ. ಇದೊಂದು ಇತಿಹಾಸ. ಮುಂಬರುವ ಚುನಾವಣೆಗೆ ಟಿಕೆಟ್ ಕೋರಿ ಸುಮಾರು 1,350 ಅರ್ಜಿಗಳು ಬಂದಿದ್ದು, ಅಭ್ಯರ್ಥಿ ಆಯ್ಕೆಗೂ ಮುನ್ನ ಬ್ಲಾಕ್ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯುತ್ತೇವೆ. ಟಿಕೆಟ್ ಕೋರಿ ಪಕ್ಷದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಕಳುಹಿಸಿ ಕೊಡುತ್ತೇವೆಂದು ಹೇಳಿದರು.

ಡಿ.31ರೊಳಗೆ ಆ ಪಟ್ಟಿ ಪರಿಷ್ಕರಿಸಿ ಕೊಡಬೇಕು. ಬಳಿಕ ಮಾನದಂಡದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಜ.15ರೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಜ.5ರಂದು ರಾಜ್ಯಮಟ್ಟದ ಚುನಾವಣಾ ಸಮಿತಿ ಮತ್ತೆ ಸಭೆ ನಡೆಸಲಿದೆ. ಆದಷ್ಟು ಶೀಘ್ರ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇನೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಆಧಾರ ಸ್ತಂಭವಾಗಿರುವ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗುವುದು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಧ್ವನಿ ಪಕ್ಷದ ಧ್ವನಿಯಾಗಬೇಕು ಎಂಬುದು ಈ ಸಮಿತಿಯ ತೀರ್ಮಾನ. ಹೀಗಾಗಿ ಈ ವರೆಗೂ ಬಂದಿರುವ ಅರ್ಜಿಗಳನ್ನು ಆಯಾ ಜಿಲ್ಲಾ ಕಾಂಗ್ರೆಸ್'ಗೆ ಕಳುಹಿಸಿಕೊಡುತ್ತೇವೆ.

ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಬ್ಲಾಕ್ ಮಟ್ಟದ ನಾಯಕರನ್ನು ಕರೆಸಿ ಚರ್ಚಿಸಲಾಗುವುದು. ರಾಜ್ಯಮಟ್ಟದ ಚುನಾವಣಾ ಸಮಿತಿಯಿಂದ ಇಬ್ಬರು ಸದಸ್ಯರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಲಾಗುವುದು. ಪಕ್ಷದ 5 ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಚುನಾವಣಾ ಸಮಿತಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಎಲ್ಲರೂ ಸೇರಿ ಚರ್ಚೆ ಮಾಡುತ್ತಾರೆ. ಆದಷ್ಟು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಸೇರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com