ಕಲಾಪಕ್ಕೆ ಗೈರು: ಬೆಳಗಾವಿ ಚಳಿಗಾಲ ಅಧಿವೇಶನ ನೀರಸ, ವ್ಯರ್ಥ ಕಾಲಹರಣ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ್ದರೂ, ಮೂರು ದಿನಗಳಿಂದ ವಿಧಾನಸಭೆಯಲ್ಲಿ ಕಲಾಪಗಳು ಯೋಜನೆಯ ಪ್ರಕಾರ ನಡೆಯುತ್ತಿಲ್ಲ.
ಕರ್ನಾಟಕ ವಿಧಾನಸಭೆ ಅಧಿವೇಶನವನ್ನು ವೀಕ್ಷಿಸುತ್ತಿರುವ ಶಾಲಾ ವಿದ್ಯಾರ್ಥಿಗಳು(ಸಾಂದರ್ಭಿಕ ಚಿತ್ರ)
ಕರ್ನಾಟಕ ವಿಧಾನಸಭೆ ಅಧಿವೇಶನವನ್ನು ವೀಕ್ಷಿಸುತ್ತಿರುವ ಶಾಲಾ ವಿದ್ಯಾರ್ಥಿಗಳು(ಸಾಂದರ್ಭಿಕ ಚಿತ್ರ)

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ್ದರೂ, ಮೂರು ದಿನಗಳಿಂದ ವಿಧಾನಸಭೆಯಲ್ಲಿ ಕಲಾಪಗಳು ಯೋಜನೆಯ ಪ್ರಕಾರ ನಡೆಯುತ್ತಿಲ್ಲ.

ನಿನ್ನೆ ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನಕ್ಕೆ ಬಹುತೇಕ ಶಾಸಕರು ಗೈರು ಹಾಜರಾಗಿದ್ದು, ಕಲಾಪವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾಮಾನ್ಯವಾಗಿ ಶುಕ್ರವಾರದಂದು ಅರ್ಧ ದಿನ ಅಧಿವೇಶನ ನಡೆಯುವುದರಿಂದ ಹೆಚ್ಚಿನವರು ಬೆಳಗಾವಿಯಿಂದ ತೆರಳಿದ್ದರು. ನಿನ್ನೆ ನಡೆದ ಕಿರು ವಿಧಾನಸಭೆ ಅಧಿವೇಶನಕ್ಕೆ ಬಿಜೆಪಿಯ 50, ಕಾಂಗ್ರೆಸ್‌ನ 10 ಮತ್ತು ಜೆಡಿಎಸ್‌ನ ಐವರು ಶಾಸಕರು ಮಾತ್ರ ಹಾಜರಿದ್ದರು. ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷರಿಗೆ ನೆರವಾಗಲು ಸದನದಲ್ಲಿ ಸದಸ್ಯರ ಕೊರತೆ ತೀವ್ರವಾಗಿತ್ತು.

ಕಳೆದ ಐದು ದಿನಗಳಲ್ಲಿ ಮೂರು ದಿನ ಮಾತ್ರ ಪರಿಣಾಮಕಾರಿಯಾಗಿ ಅಧಿವೇಶನ ನಡೆದಿದೆ. ಉದ್ಘಾಟನಾ ದಿನದಂದು ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಬಿಟ್ಟರೆ ಕಲಾಪದಲ್ಲಿ ಬೇರೆ ಯಾವುದೇ ಚರ್ಚೆಗಳು ಫಲಪ್ರದವಾಗಿ ನಡೆದಿಲ್ಲ,

ಮಂಗಳವಾರ, ಬುಧವಾರ ಮತ್ತು ಗುರುವಾರ ಮಾತ್ರ ಅಧಿವೇಶನ ನಡೆಸಲಾಯಿತು. ಡಿಸೆಂಬರ್ 26ರಂದು ಅಧಿವೇಶನದ ದ್ವಿತೀಯಾರ್ಧ ಆರಂಭವಾಗಲಿದ್ದು, ಡಿಸೆಂಬರ್ 30ರ ಕೊನೆಯ ದಿನದವರೆಗೂ ಉಭಯ ಸದನಗಳಲ್ಲಿ ಕಲಾಪ ಸಮರ್ಥವಾಗಿ ನಡೆಯುವುದೇ ಎಂದು ನೋಡಬೇಕಿದೆ. 

ಸುವರ್ಣ ವಿಧಾನಸೌಧವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಉತ್ತರ ಕರ್ನಾಟಕದಾದ್ಯಂತದ ಮುಖಂಡರು ಸರ್ಕಾರವನ್ನು ಒತ್ತಾಯಿಸುತ್ತಾರೆ. ಆದರೆ, ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನವನ್ನು ಹೊರತುಪಡಿಸಿ, ಸರ್ಕಾರವು ಎಲ್ಲಾ ಸಮಯದಲ್ಲೂ ಸೌಧವನ್ನು ಮುಚ್ಚಿರುತ್ತದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಪರಿಶೀಲನೆ: ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಮರುಪರಿಶೀಲಿಸಿ ಹೊಸ ರೂಪ ನೀಡಲಾಗುವುದು. ನಿನ್ನೆ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳಾದ ‘ವಿಶ್ವಕರ್ಮ’ರನ್ನು ನಿರ್ಲಕ್ಷಿಸಲಾಗುತ್ತಿದ್ದು, ಸರಕಾರ ಉದ್ದೇಶಪೂರ್ವಕವಾಗಿ ವರದಿಯನ್ನು ಹೊರತರಲು ಸಿದ್ಧವಾಗಿಲ್ಲ ಎಂದು ಸದಸ್ಯರು ಆರೋಪಿಸಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಧರಣಿ
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಕಾಂಕ್ಷಿಗಳು ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು. ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 545 ಸಬ್‌ಇನ್‌ಸ್ಪೆಕ್ಟರ್‌ಗಳ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯನ್ನು ಇತ್ತೀಚೆಗೆ ರದ್ದುಗೊಳಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದು ಹಗರಣದಲ್ಲಿ ಬಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com