ಬಳ್ಳಾರಿ: ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷಕ್ಕೆ ಅದರದ್ದೇ ಆದ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ, ಇದರಲ್ಲಿ ಯಾವುದೇ ಗೊಂದಲ ಆಗುವುದಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ನಾನು, ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.
ರೆಡ್ಡಿ ಬುದ್ಧಿವಂತರು, ತಿಳಿದವರು, ಅನುಭವಿ ವ್ಯಕ್ತಿ ಇದ್ದಾರೆ. ನಾನೊಬ್ಬ ಪ್ರಾಣ ಸ್ನೇಹಿತನಾಗಿ, ರೆಡ್ಡಿ ಬಿಜೆಪಿ ಶಕ್ತಿಯಾಗಿದ್ದರು, ಪಕ್ಷವು ಅವರಿಗೆ ಶಕ್ತಿಯಾಗಿ ನಿಂತಿತ್ತು. ಅವರು ವೈಯಕ್ತಿಕವಾಗಿ ಪಕ್ಷ ಮಾಡಿದ್ದಾರೆ. ಆದರೆ ಬಿಜೆಪಿ ಅವರನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ, ಅವರು ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ. ಅವರು ಅನುಭವಿ ರಾಜಕಾರಣಿಯಾಗಿದ್ದು, ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈವರೆಗೆ ರೆಡ್ಡಿಯವರ ಜೊತೆಗೆ ಬಂಡೆಯಾಗಿ ನಿಂತಿದ್ದೆ. ಇನ್ನು ಮುಂದೆಯೂ ಸ್ನೇಹಿತನಾಗಿ ಮುಂದುವರಿಯುತ್ತೇನೆ. ಆದರೆ ರಾಜಕಾರಣ ಮತ್ತು ಸ್ನೇಹ ಬೇರೆಯಾಗಿದೆ. ರೆಡ್ಡಿಯವರೊಂದಿಗೆ ನಮ್ಮ ಎಲ್ಲಾ ನಾಯಕರು, ಎಲ್ಲಾ ಸಂದರ್ಭದಲ್ಲಿ ನಿಂತಿದ್ದರು. ಮತ್ತೆ ಮಾತುಕತೆ ಮಾಡುವ ಅಗತ್ಯ ಇಲ್ಲ. ಈಗ ಮತ್ತೆ ಮನವೊಲಿಸಲು ನಾ ಹೋಗಲ್ಲ. ಮನವೊಲಿಕೆ ಈಗ ಮಾಡಿ ಏನು ಪ್ರಯೋಜನ? ಈ ಬಗ್ಗೆ ನಾ ಚರ್ಚೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
Advertisement