2023ರಲ್ಲಿ ಬಿಜೆಪಿ ಬಹುಮತ ಪಡೆಯಲು 'ಹಳೆ ಮೈಸೂರು' ಭಾಗಕ್ಕೆ ವಿಶೇಷ ಗಮನ: ಸಿ.ಟಿ.ರವಿ
ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆಯಲು ‘ಹಳೆ ಮೈಸೂರು’ ಭಾಗದ ಮೇಲೆ ವಿಶೇಷ ಗಮನ ಹರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಬುಧವಾರ ಹೇಳಿದ್ದಾರೆ.
ಒಕ್ಕಲಿಗ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಭಿವೃದ್ಧಿ ಮತ್ತು ಹಿಂದುತ್ವವನ್ನೇ ಅಜೆಂಡಾವಾಗಿಟ್ಟುಕೊಂಡು ಜನರ ಮುಂದೆ ಹೋಗಲಿದೆ ಎಂದು ಸಿಟಿ ರವಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 30 ರಂದು ಮಂಡ್ಯ ಮತ್ತು ಡಿಸೆಂಬರ್ 31 ರಂದು ದೇವನಹಳ್ಳಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ತ್ರಿಪುರಾದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ರಾಜೀನಾಮೆ
ಅಮಿತ್ ಶಾ ಅವರು ಒಬ್ಬ ಉತ್ತಮ ಆಟಗಾರನಂತೆ ಯಾವುದೇ ಪಿಚ್‌ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲರು. ಹೀಗಾಗಿ ನಾವು ಹಳೆ ಮೈಸೂರು ಭಾಗದ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಈ ಭಾಗದ ಜನರ ವಿಶ್ವಾಸವನ್ನು ಗಳಿಸದೆ ಪಕ್ಷ ಬಹುಮತ ಪಡೆಯಲು ಸಾಧ್ಯವಿಲ್ಲ ಎಂಬುದನ್ನು 2008 ಮತ್ತು 2018 ರ ಚುನಾವಣೆಯಿಂದ ನಾವು ಅರಿತುಕೊಂಡಿದ್ದೇವೆ. ಹೀಗಾಗಿ ಹಳೆ ಮೈಸೂರು ಭಾಗದತ್ತ ವಿಶೇಷ ಗಮನ ಹರಿಸುತ್ತೇವೆ ಎಂದು ರವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಕಾಂಗ್ರೆಸ್ ಕೂಡ ಪ್ರಬಲವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ