'ಸಿದ್ದರಾಮೋತ್ಸವ' ಪಕ್ಷಕ್ಕೆ ಹಾನಿ ಮಾಡಬಾರದು, ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗಬಾರದು: ಡಿ ಕೆ ಸುರೇಶ್

‘ಸಿದ್ದರಾಮೋತ್ಸವ’ ಕುರಿತಂತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳು, ಬಣ ಬಡಿದಾಟ ಮುನ್ನಲೆಗೆ ಬಂದಿದೆ. ಬೆಂಗಳೂರಿನ ಎರಡು ಸ್ಥಳಗಳಲ್ಲಿ ನಿನ್ನೆ ಪಕ್ಷದ ಮುಖಂಡರು ಏಕಕಾಲದಲ್ಲಿ ಎರಡು ಸಭೆಗಳನ್ನು ನಡೆಸುವ ಮೂಲಕ ಅದು ಜಗಜ್ಜಾಹೀರಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು
Updated on

ಬೆಂಗಳೂರು: ‘ಸಿದ್ದರಾಮೋತ್ಸವ’ ಕುರಿತಂತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳು, ಬಣ ಬಡಿದಾಟ ಮುನ್ನಲೆಗೆ ಬಂದಿದೆ. ಬೆಂಗಳೂರಿನ ಎರಡು ಸ್ಥಳಗಳಲ್ಲಿ ನಿನ್ನೆ ಪಕ್ಷದ ಮುಖಂಡರು ಏಕಕಾಲದಲ್ಲಿ ಎರಡು ಸಭೆಗಳನ್ನು ನಡೆಸುವ ಮೂಲಕ ಅದು ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಪಕ್ಷದ ಹಲವು ಮುಖಂಡರು ಅರಮನೆ ಮೈದಾನದಲ್ಲಿ ‘ಸಿದ್ದರಾಮೋತ್ಸವ’ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಡಿಕೆ ಶಿವಕುಮಾರ್ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಲು ಇತರ ನಾಯಕರೊಂದಿಗೆ ಸಭೆ ನಡೆಸುವಲ್ಲಿ ನಿರತರಾಗಿದ್ದರು. ಈಶ್ವರ ಖಂಡ್ರೆ, ಕೆ.ಜೆ.ಜಾರ್ಜ್ ಅವರಂತಹ ಕೆಲವೇ ನಾಯಕರು ಎರಡೂ ಸಭೆಗಳಲ್ಲಿ ಭಾಗಿಯಾಗಿದ್ದರು.

ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬವನ್ನು ಆಚರಿಸಲು ಅವರ ಬೆಂಬಲಿಗರು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಾರ್ವಜನಿಕ ಸಭೆ ಸಿದ್ದರಾಮೋತ್ಸವವನ್ನು ಆಯೋಜಿಸಿದ್ದಾರೆ. ನಿನ್ನೆ ಈ ಬಗ್ಗೆ ಮಾಧ್ಯಮದವರು ಶಿವಕುಮಾರ್ ಅವರನ್ನು ಕೇಳಿದಾಗ, ತಮ್ಮ ಹೆಸರಿನಲ್ಲಿ ಯಾವುದೇ ಆಚರಣೆಗಳನ್ನು ಬೇಕಾಗಿಲ್ಲ, ಅದನ್ನು ನಾನು ಬಯಸುವುದಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಾಂಗ್ರೆಸೋತ್ಸವ ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು. ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ‘ಸಿದ್ದರಾಮೋತ್ಸವ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅರಮನೆ ಮೈದಾನದ ಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮೋತ್ಸವ’ ಮೂಲಕ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಬಾರದು. ನಾವು ಈಗ ಚುನಾವಣಾ ವರ್ಷದಲ್ಲಿದ್ದೇವೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಿಂದ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಅವರು 60ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಶಿವಕುಮಾರೋತ್ಸವ-23 ಆಚರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತ ಜಿ.ಸಿ.ರಾಜು ಅವರು ಸಿದ್ದರಾಮೋತ್ಸವ ಸಮಿತಿಗೆ ಪತ್ರ ಬರೆದಿದ್ದಾರೆ. ಪಕ್ಷದ ಲಕ್ಷಗಟ್ಟಲೆ ಕಾರ್ಯಕರ್ತರು ಈ ಕಾರ್ಯಕ್ರಮ ನಡೆಯಬೇಕೆಂದು ಬಯಸಿ ಕಾರ್ಯಕ್ರಮ ಆಯೋಜಿಸುವಂತೆ ಸಮಿತಿಗೆ ತಾಕೀತು ಮಾಡಿದರು. ಆದರೆ ತಾವು ಕೇದಾರನಾಥದಲ್ಲಿ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಬಯಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಹೇಳಿದ್ದಾರೆ. 

ತಾವು ಸಿದ್ದರಾಮೋತ್ಸವ ಸಮಿತಿ ಸಭೆಯಲ್ಲಿ ಭಾಗವಹಿಸುತ್ತೀರೋ ಎಂದು ಕೇಳಿದಾಗ ನನಗೆ ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು, ನಾನು ರಾಹುಲ್ ಗಾಂಧಿ ಅವರೊಂದಿಗೆ ಅತಿಥಿಯಾಗಿ ಪಾಲ್ಗೊಳ್ಳುತ್ತೇನೆ. ನನಗೆ ಪಕ್ಷ ಎಲ್ಲಕ್ಕಿಂತ ಹೆಚ್ಚಾಗಿದ್ದು, 2023ರಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. 

ನಿನ್ನೆ ಅರಮನೆ ಮೈದಾನದ ಸಭೆಯ ನಂತರ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com