ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಆಕ್ರೋಶ: 2023ರ ವಿಧಾನಸಭೆಗೂ ಮುನ್ನ ಪಕ್ಷಕ್ಕೆ ಭಾರೀ ಹಿನ್ನಡೆ!
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪಕ್ಷದ ಸಾಮಾಜಿಕ ಮಾಧ್ಯಮ ನಿರ್ವಹಣೆ ಸೇರಿದಂತೆ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆ ನೀಡುತ್ತಿರುವುದು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತವರು ಕ್ಷೇತ್ರ ಹಾಗೂ ಲೋಕಸಭೆ ಕ್ಷೇತ್ರದಲ್ಲಿ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಮಧ್ಯಪ್ರವೇಶಿಸಬೇಕಾಯಿತು.
ಚಿಕ್ಕಮಗಳೂರು ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರಿವಿನಅಂಗಡಿ ಅವರಿಗೆ ಕರೆ ಮಾಡಿ ಮಾತನಾಡಿ ರಾಜಿನಿಮಾ ನಿರ್ಧಾರ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ. ಹತ್ಯೆಯ ನಂತರ ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ, ಚಿತ್ರದುರ್ಗ, ಹುಬ್ಬಳ್ಳಿ ಮತ್ತು ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಬಿಜೆಪಿವೈಎಂ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ರಾಜೀನಾಮೆ ನೀಡಿ ಪಕ್ಷದ ಮುಖಂಡರು ಮತ್ತು ಸರ್ಕಾರಕ್ಕೆ ಸಂದೇಶವನ್ನು ರವಾನಿಸಿದರು.
ಇದರ ಜೊತೆಗೆ ಪಕ್ಷದ ಸಾಮಾಜಿಕ ಮಾಧ್ಯಮ ಖಾತೆ ನಿರ್ವಹಣೆ ಮಾಡುತ್ತಿದ್ದ ಸುಮಾರು 100 ಮಂದಿ ತಾವು ಅದರಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಕೇಶ್ ಟಿಆರ್ ಎಂಬುವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಭಗವದ್ಗೀತೆ ಪ್ರತಿಯನ್ನು ಕೊರಿಯರ್ ಮಾಡಿದ್ದಾರೆ. ಭಗವಾನ್ ಕೃಷ್ಣ ಅರ್ಜುನನಿಗೆ ಬೋಧಿಸಿದ ಧರ್ಮವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ, ಕೆಲವು ಕಾರ್ಯಕರ್ತರು ಪಕ್ಷದ ಸಿದ್ಧಾಂತವನ್ನು ರಕ್ಷಿಸುವಲ್ಲಿ ಬೊಮ್ಮಾಯಿ ಸಂಪುಟದ ಸಮಗ್ರತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಸಂಪುಟದಲ್ಲಿರುವ ಬಹುತೇಕ ಸಚಿವರು ಬೇರೆ ಬೇರೆ ಪಕ್ಷಗಳಿಂದ ಬಂದಿರುವುದು ಇದಕ್ಕೆ ಕಾರಣವಾಗಿದೆ. ನಮಗೆ ಧರ್ಮವೇ ಮುಖ್ಯ, ನಮ್ಮ ಮೊದಲ ಆದ್ಯತೆ ಧರ್ಮಕ್ಕೆ ಎಂದು ಹುಬ್ಬಳ್ಳಿಯ ರೇಖಾ ಶಂಬು ತಮ್ಮ ರಾಜಿನಾಮೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಪ್ರಚಾರಕ ಎಂ ಜಿ ಮಹೇಶ್ ಗುರುವಾರ ಬಿಜೆಪಿವೈಎಂ ಪದಾಧಿಕಾರಿಗಳಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಮನವಿ ಮಾಡಿದರು. ಪಕ್ಷವು ಅವರನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ