ಬಾಣಂತಿ, ನವಜಾತ ಶಿಶುಗಳ ದಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ: ವಿಕೃತ ಮನಸ್ಸಿಗೆ ಧಿಕ್ಕಾರ; ಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲ!

ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ಎಂದು ಪ್ರಶ್ನಿಸಿದ್ದಾರೆ
ಸುಧಾಕರ್
ಸುಧಾಕರ್
Updated on

ಬೆಂಗಳೂರು: ತುಮಕೂರಿನಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಗ್ಯ ಸಚಿವ ಕೆ.ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ, ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ʼಸಾವುಗೇಡಿ ಸರಕಾರʼದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ ಬಿಜೆಪಿ ಸರಕಾರಕ್ಕೆ ಇದೆಯಾ ಎಂದಿದ್ದಾರೆ.

ಡಾ.ಸುಧಾಕರ್‌ ಅವರೇ; ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ.

ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ & ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇಂಥ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ?

ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಆತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ?

ನನ್ನ ಸರಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ,ಇಲ್ಲಿ ನಡೆದದ್ದು ಕ್ರೌರ್ಯ.

ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು.

ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ! ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ಪರ್ಸಂಟೇಜ್‌ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ʼಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ ಸಚಿವರೇ ಎಂದು ಕುಮಾರಸ್ವಾಮಿ ತಪರಾಕಿ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com