ಹಿಂದು ಎಂಬುದು ಅಶ್ಲೀಲ ಪದ: ಸತೀಶ್ ಜಾರಕಿಹೊಳಿ ಹೇಳಿಕೆಗೆ ವ್ಯಾಪಕ ಆಕ್ರೋಶ

ಹಿಂದು ನಮ್ಮ ಪದವೇ ಅಲ್ಲ. ಇದು ಪರ್ಷಿಯನ್ ನಿಂದ ಬಂದಿರುವ ಪದ. ಹಿಂದು ಪದದ ಅರ್ಥ ಅಶ್ಲೀಲವಾಗಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಳಗಾವಿ: ಹಿಂದು ನಮ್ಮ ಪದವೇ ಅಲ್ಲ. ಇದು ಪರ್ಷಿಯನ್ ನಿಂದ ಬಂದಿರುವ ಪದ. ಹಿಂದು ಪದದ ಅರ್ಥ ಅಶ್ಲೀಲವಾಗಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಸೋಮವಾರ ನಿಪಾಣಿಯಲ್ಲಿ ಮಾನವ ಬಂದುತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹಿಂದೂ’ ಪದದ ಮೂಲ ಅರ್ಥದ ಕುರಿತು ಮಾತನಾಡಿದರು.

ಜಾರಕಿಹೊಳಿಯವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ ಅನ್ನು "ಹಿಂದೂ ವಿರೋಧಿ" ಎಂದು ಬಣ್ಣಿಸಿದೆ. ಅಲ್ಲದೆ, ಜಾರಕಿಹೊಳಿ ಹೇಳಿಕೆಯು ಪಕ್ಷದ ನಿಲುವೇ ಎಂದು ಪ್ರಶ್ನಿಸಿದೆ.

ಹಿಂದೂ ಧರ್ಮದ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆಯೇ?" ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಜಾರಕಿಹೊಳಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಎಐಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ, ಇದನ್ನು ಪಕ್ಷ ತಿರಸ್ಕರಿಸುತ್ತದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, ಜಾರಕಿಹೊಳಿಯವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಹಿಂದೂ ಧರ್ಮ ಒಂದು ಜೀವನ ವಿಧಾನ ಮತ್ತು ನಾಗರಿಕತೆಯ ವಾಸ್ತವ. ಪ್ರತಿಯೊಂದು ಧರ್ಮ, ನಂಬಿಕೆ ಮತ್ತು ನಂಬಿಕೆಯನ್ನು ಗೌರವಿಸಲು ಕಾಂಗ್ರೆಸ್ ದೇಶವನ್ನು ಕಟ್ಟಿದೆ. ಇದು ಭಾರತದ ಸಾರ ಎಂದು ತಿಳಿಸಿದ್ದಾರೆ.

ನಿಪ್ಪಾಣಿಯಲ್ಲಿ ಮಾತನಾಡಿದ್ದ ಜಾರಕಿಹೊಳಿಯವರು, ಹಿಂದೂ’ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮ ಪದವಲ್ಲ, ಪರ್ಷಿಯನ್ ನಿಂದ ಬಂದಿದ್ದು. ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com