ಬಿಜೆಪಿಯವರಿಗೆ ನಾಗರಿಕತೆ ಇದೆಯಾ, ಕಾಟಚಾರಕ್ಕೆ ದೇವೇಗೌಡರನ್ನು ಕೆಂಪೇಗೌಡ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು ನಗರ ನಿರ್ಮಾತೃ  ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಉದ್ಘಾಟಿಸಿ ಹೋಗಿದ್ದರು. ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ  ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಉದ್ಘಾಟಿಸಿ ಹೋಗಿದ್ದರು. ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.

ಪ್ರಧಾನಿಯವರು ಬಂದು ಹೋದ ನಂತರ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಧಾನಿಯವರು ಭಾಗವಹಿಸಿದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರನ್ನು ಆಹ್ವಾನಿಸಿರಲಿಲ್ಲ ಎಂದು ಹೇಳಿತ್ತು. 

ಅದಕ್ಕೆ ಬಿಜೆಪಿ ತಿರುಗೇಟು ಕೊಟ್ಟು,  ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಸಿಎಂ ಬೊಮ್ಮಾಯಿಯವರೇ ದೂರವಾಣಿ‌ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೇವೇಗೌಡರಿಗೆ ಕಳುಹಿಸಿದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಿತ್ತು. ಅಷ್ಟೆ ಅಲ್ಲದೆ ಸಿಎಂ ಬೊಮ್ಮಾಯಿಯವರು ಮಾಧ್ಯಮಗಳ ಮುಂದೆ ದೇವೇಗೌಡರಿಗೆ ಫೋನ್ ಮಾಡಿದ್ದೆವು, ಆಹ್ವಾನ ನೀಡಿದ್ದೆವು ಎಂದಿದ್ದರು.

ಆದರೆ ಇಂದು ಜೆಡಿಎಸ್ ಮತ್ತೆ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದೆ.ದೇವೇಗೌಡರನ್ನು ಕರೆದಿದ್ದು ನಿಜ. ಆದರೆ ಕರೆದ ರೀತಿ ನೀತಿ ಸರಿಯಿಲ್ಲ. ಮೇರು ನಾಯಕನ ವಿಷಯದಲ್ಲಿ ಬಿಜೆಪಿ ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಮತ್ತೆ ಟ್ವೀಟ್ ಮಾಡಿ ಕಿಡಿಕಾರಿದೆ.

ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಚ್​.ಡಿ.ದೇವೇಗೌಡರ ಹೆಸರೇ ಇಲ್ಲ. ನವೆಂಬರ್ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪತ್ರ ಬರೆದಿದ್ದು ಯಾವಾಗ? ಆ ಪತ್ರ ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ? ಸಿಎಂ ಪತ್ರವನ್ನು ‘ಸಂಘ ಸಂಸ್ಕಾರ’ದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೆಸರೆಲ್ಲಿ ಬರೆಯಲ್ಪಟ್ಟಿದೆ? ಮೇರು ನಾಯಕನಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಟ್ವೀಟ್​​ ಮಾಡಿ ಜೆಡಿಎಸ್ ಗುಡುಗಿದೆ.

ಅಲ್ಲದೆ ಇಂದು ರಾಮನಗರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ದೇವೇಗೌಡರಿಗೆ ಕುಟುಂಬ ಬಿಟ್ಟರೆ ಬೇರೋನೂ ನೋಡುವುದಿಲ್ಲ, ಕರ್ನಾಟಕ ಅಸ್ಮಿತೆ ವಿಷಯದಲ್ಲಿ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿ ಪಕ್ಷದವರಿಗೆ ನಾಗರಿಕತೆ ಇದೆಯೇ, ನಿನ್ನೆಯ ಕಾರ್ಯಕ್ರಮಕ್ಕೆ ಮೊನ್ನೆ ರಾತ್ರಿ 9-9.30 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳು ದೇವೇಗೌಡರಿಗೆ ಕರೆ ಮಾಡಿದ್ದರು. ದೇವೇಗೌಡರು ಮಲಗಿದ್ದಾಗ ರಾತ್ರಿ 12.45ರ ಹೊತ್ತಿಗೆ ಯಾರ ಮುಖಾಂತರವೋ ಮನೆ ಕಂಪೌಂಡ್ ನಲ್ಲಿ ಪೊಲೀಸರ ಕೈಯಲ್ಲಿ ಪತ್ರ ನೀಡಿ ಹೋಗಿದ್ದರು. ಪತ್ರದಲ್ಲಿ ಮಾನ್ಯರೇ ಎಂದು ಆರಂಭಿಸಿ ವಿಷಯ ಬರೆದು ಕೊನೆಯಲ್ಲಿ ಕೆಳಭಾಗದಲ್ಲಿ ದೇವೇಗೌಡರ ಹೆಸರು ಹಾಕಿದ್ದಾರೆ. 

ಕರ್ನಾಟಕ ಅಸ್ಮಿತೆ ಎಂದು ಹೇಳುವ ಬಿಜೆಪಿಗರು ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಲು ಹೊರಟಿದ್ದೀರಿ, ಪ್ರತಿನಿತ್ಯ ಹಿಂದಿ ಭಾಷೆ ಹೇರಿಕೆ ಮಾಡಿ ಹುನ್ನಾರ ಮಾಡಲು ಹೊರಟಿದೆ. ಇವತ್ತು ನರೇಂದ್ರ ಮೋದಿಯವರ ಮುಂದೆ ರಾಜ್ಯ ಬಿಜೆಪಿ ನಾಯಕರು ಕೈಕಟ್ಟಿ ನಿಲ್ಲುವ ಪರಿಸ್ಥಿತಿಯಿದೆ ಎಂದು ಆರೋಪಿಸಿದರು.

ನಿನ್ನೆ ರಾಜ್ಯಕ್ಕೆ ಬಂದು ಹೋದ ಪ್ರಧಾನಿ ಮೋದಯವರು ರಾಜ್ಯದ ಜನತೆಗೆ ಏನು ಸಂದೇಶ ಕೊಟ್ಟಿದ್ದಾರೆ, ಪ್ರತಿ ಸರ್ಕಾರಗಳು ಬಂದಾಗಲೂ ಹೊಸ ರೈಲ್ವೆ ಯೋಜನೆ ತರುತ್ತದೆ. ಪ್ರಧಾನಿ ಒಬ್ಬರೇ ಅಭಿವೃದ್ಧಿ ಮಾಡುತ್ತಿದ್ದಾರ, ಇಲ್ಲಿ ರಾಜ್ಯ ನಾಯಕರು ಮೋದಿ ಹೆಸರೇಳಿಕೊಂಡು ಮತ ಕೇಳುತ್ತಿದ್ದಾರೆ, ಪ್ರಧಾನಿ ಮೋದಿ ನಾಡು ಕಟ್ಟಲು ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದರು. ಇಲ್ಲಿನ ಬಿಜೆಪಿ ಸರ್ಕಾರದ ಸಾಧನೆಯೇನಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com