ದಕ್ಷಿಣ ಪಿನಾಕಿನಿ ನೀರಿಗೆ ನ್ಯಾಯಾಧೀಕರಣ, ರಾಜ್ಯಕ್ಕೆ ಮರಣ ಶಾಸನ; ಕನ್ನಡಿಗರನ್ನು 'ಜಲದಾಸ್ಯ'ಕ್ಕೆ ದೂಡುವುದನ್ನು ಸಹಿಸಲಾಗದು: ಎಚ್ ಡಿಕೆ

ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರ ನೆಲ, ಜಲ, ಭಾಷೆಯಂಥ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣದ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು:  ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರ ನೆಲ, ಜಲ, ಭಾಷೆಯಂಥ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣದ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರ ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇಪದೆ ರುಜುವಾತಾಗುತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಅವು ಕನ್ನಡಿಗರನ್ನು ಕಾಡುತ್ತಲೇ ಇವೆ. ಈಗ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರಿನ ವಿಷಯದಲ್ಲಿ ಕೇಂದ್ರ ಬಿಜೆಪಿ ಸರಕಾರ ಕನ್ನಡಿಗರ ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆ ಎಂದಿದ್ದಾರೆ.

ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಅದರ ನಡುವೆ

ಯೇ ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲ ವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ತಳ್ಳಿ ಕನ್ನಡಿಗರನ್ನು ಕಾಡುವ ಹವಣಿಕೆ ಇದಷ್ಟೇ ಎಂದಿರುವ ಮಾಜಿ ಸಿಎಂ ಎಚ್‌ಡಿಕೆ, ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರ ರಾಜ್ಯದ ಪಾಲಿಗೆ ಅಕ್ಷರಶಃ ಮರಣಶಾಸನ. ಇದನ್ನು ರಾಜ್ಯ ಸರ್ಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಲಾಭದ ಉದ್ದೇಶಕ್ಕಾಗಿ ಬಿಜೆಪಿ ಸರಕಾರವು ನೆಲ, ಜಲ, ಭಾಷೆಯಂಥ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣದ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರವು ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ. ಇದು ಸರಿಯಲ್ಲ. ಕನ್ನಡಿಗರನ್ನು ಮತ್ತೊಮ್ಮೆ ʼಜಲದಾಸ್ಯʼಕ್ಕೆ ದೂಡುವುದನ್ನು ನಾವು ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲೂ ಕೇಂದ್ರವು ರಾಜ್ಯಕ್ಕೆ ಸೊನ್ನೆ ಸುತ್ತಿದೆ. 2022ರ ಫೆ.18ರಂದು ಸಭೆ ನಡೆಸಿದ ಕೇಂದ್ರವು, ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್‌ ಮೂಲಕ ಕಾವೇರಿಗೆ ಹರಿಸುವ ಯೋಜನೆಯ ಮಾಹಿತಿ ನೀಡಿತು. ಇಷ್ಟೂ ನೀರನ್ನು ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಮಾತ್ರ ಹಂಚಿತು. ಈ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕ ಪ್ರಮುಖ ಪಾಲುದಾರ & ಹಕ್ಕುದಾರ ರಾಜ್ಯ. ಆದರೆ, 247 ಟಿಎಂಸಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಶೂನ್ಯ. ಆ ಸಭೆಯಲ್ಲಿ ರಾಜ್ಯಕ್ಕೆ ಅಪಮಾನ ಮಾಡಲಾಯಿತು ಎಂಬ ಮಾಹಿತಿಯೂ ಬಂದಿತ್ತು ಎಂದಿದ್ದಾರೆ.

ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಹನಿ ನೀರನ್ನೂ ಹಂಚಿಕೆ ಮಾಡಿಲ್ಲ ಎಂದರೆ, ಕೇಂದ್ರ ಸರಕಾರಕ್ಕೆ ಕರ್ನಾಟಕದ ಮೇಲೆ ಅದೆಷ್ಟು ನಿರ್ಲಕ್ಷ್ಯ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. "ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ" ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಸಂಸತ್ತಿನಲ್ಲಿ ಅಲವತ್ತುಕೊಂಡರೂ ಕೇಂದ್ರವು ಕನ್ನಡಿಗರ ಮೇಲೆ ಕಠಿಣ ನೀತಿ ಮುಂದುವರಿಸಿದೆ. ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳನ್ನು ಒಡೆದಾಳುವ ಬಿಜೆಪಿಯ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com