ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಿಎಂ; ದಲಿತರು, ಮಹಿಳೆಯರಿಗೆ ಡಿಸಿಎಂ ಸ್ಥಾನ: ಎಚ್ ಡಿ ಕುಮಾರಸ್ವಾಮಿ
ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮುಕ್ತ ಅವಕಾಶಗಳೂ ನಮ್ಮ ಪಕ್ಷದಲ್ಲಿ ಇವೆ. ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ಕ್ಯಾಲನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ’ ಎಂದರು.
ಮುಸ್ಲಿಮರೂ ನಮ್ಮವರೇ. ಅವರೂ ಕರ್ನಾಟಕದ ಪ್ರಜೆಗಳು, ಕನ್ನಡಿಗರು. ಹೀಗಾಗಿ, ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬಾರದೆಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ. ನನಗೆ ಆ ಸಮುದಾಯಗಳಲ್ಲಿನ ಸಮಸ್ಯೆಗೆ ಪರಿಹಾರ ಬೇಕು’ ಎಂದು ತಿಳಿಸಿದರು.
‘ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧನಿದ್ದೇನೆ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆ ಅಲ್ಲ. ದಲಿತ ಸಮುದಾಯದ ಯುವಕನೊಬ್ಬ ಆತ ಎದುರಿಸಿರುವ ಸಮಸ್ಯೆ ಹೇಳಿಕೊಂಡ. ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ ಅವರು, ದಲಿತರ ಮತ ಪಡೆಯಲು ಈ ಘೋಷಣೆ ಮಾಡಿಲ್ಲ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ.
ಮಹಿಳೆಯರ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವಶ್ಯವೆಂದಾದರೆ ಅದಕ್ಕೂ ಸಿದ್ಧ’ ಎಂದು ನುಡಿದರು. ‘ಬಿಜೆಪಿಯಿಂದ ಒಂದೊಂದು ಭಾಗದಲ್ಲಿ ಒಂದೊಂದು ಸಮುದಾಯದ ಸಮಾವೇಶ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನವರೂ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಪಕ್ಷಗಳ ನಾಯಕರು ಸಮಾವೇಶ ಮಾಡಿ ಮಾತನಾಡುವುದಕ್ಕೂ, ಸಮಾಜದ ಪರಿಸ್ಥಿತಿಗೂ ಹೊಂದಾಣಿಕೆಯೇ ಆಗುತ್ತಿಲ್ಲ.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಹಾಸಿಗೆ, ದಿಂಬಿನಲ್ಲೂ ಕಾಂಗ್ರೆಸ್‌ನವರು ಹಣ ಹೊಡೆದರು ಎಂಬುದಾಗಿ ಬಿಜೆಪಿ ಆರೋಪಿಸಿತು. ಈಗ ಕಾಂಗ್ರೆಸ್‌ನವರು ಬಿಜೆಪಿ ಮೇಲೆ ದೂರುತ್ತಿದ್ದಾರೆ. ಆದರೆ, ದಲಿತರ ಪರಿಸ್ಥಿತ ಮಾತ್ರ ಸುಧಾರಿಸಿಲ್ಲ’ ಎಂದರು. ‘ಕಾಂಗ್ರೆಸ್‌ನಲ್ಲಿ ಡಾ.ಜಿ.ಪರಮೇಶ್ವರ ಹಾಗೂ ಬಿಜೆಪಿಯಲ್ಲಿ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದರೂ ಅಧಿಕಾರ ಚಲಾಯಿಸಲು ಅವರಿಗೆ ಅವಕಾಶ ಕೊಡಲಿಲ್ಲ’ ಎಂದು ಟೀಕಿಸಿದರು.

