ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ, ಮಾಜಿ ಸಿಎಂ
ವಿಜಯನಗರ: ಇನ್ನು ಕೇವಲ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದರೆ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆಯನ್ನು ಕೈಗೊಂಡಿದೆ.
ಯಾತ್ರೆಯ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ದಲಿತ ಕುಟುಂಬದ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿದ ಸಿಎಂ ಮತ್ತು ಮಾಜಿ ಸಿಎಂ ಅಲ್ಲಿ ಉಪಹಾರ ಸೇವಿಸಿ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್, ಶಾಸಕ ರಾಜುಗೌಡ ಹಾಜರಿದ್ದರು.
ಕೊಲ್ಲಾರಪ್ಪ ಮಕ್ಕಳು ಸಿಎಂಗೆ ಉಪಹಾರ ಸಿದ್ಧ ಮಾಡಿದ್ದು, ರೇಣುಕಾ, ಹುಲಿಗೆಮ್ಮ, ಅಂಬಮ್ಮರಿಂದ ಉಪಹಾರ ತಯಾರಿ ಮಾಡಿದ್ಧಾರೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಮಂಡಕ್ಕಿ ವಗ್ಗರಣೆ, ಉಪ್ಪಿಟ್ಟು, ಕೇಸರಿಬಾತ್, ಮಿರ್ಚಿ, ಚಹಾ ಸೇವಿಸಿದರು. ಸಿಎಂ, ಮಾಜಿ ಸಿಎಂ ಆಗಮನ ಹಿನ್ನೆಲೆಯಲ್ಲಿ ಇಡೀ ಅಂಬೇಡ್ಕರ್ ಕಾಲೊನಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.
ಬಿಜೆಪಿ ಜನಸಂಕಲ್ಪ ಯಾತ್ರೆ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿದೆ. ವಿಜಯನಗರ ನಂತರ ಕೊಪ್ಪಳ ಜಿಲ್ಲೆಯಲ್ಲಿ ಸಂಕಲ್ಪ ಯಾತ್ರೆ ನಡೆಯಲಿದೆ. ಸಿಎಂ ಬೊಮ್ಮಾಯಿ ಕೊಪ್ಪಳದ ಕುಷ್ಟಗಿಯಲ್ಲಿ ಸಮಾವೇಶ ನಡೆಸಿದ್ದಾರೆ.

