ಇದು ನಮ್ಮ ಮನೆಯ ಚುನಾವಣೆ, ಸ್ನೇಹಯುತ ಪೈಪೋಟಿ; ಬೇರೆಯವರನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ: ಖರ್ಗೆ

ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ರ್ಪರ್ಧಿ ಶಶಿ ತರೂರ್ ವಿರುದ್ಧವಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಲು  ನಾನು ಬಯಸುವುದಿಲ್ಲ. ಇದು ನಮ್ಮ ಮನೆಯ ಚುನಾವಣೆ. ಸ್ನೇಹಯುತ ಪೈಪೋಟಿ ನಡೆಯುತ್ತಿದೆ.
ಮಲ್ಲಿಕಾರ್ಜನ ಖರ್ಗೆ
ಮಲ್ಲಿಕಾರ್ಜನ ಖರ್ಗೆ

ಬೆಂಗಳೂರು: ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ರ್ಪರ್ಧಿ ಶಶಿ ತರೂರ್ ವಿರುದ್ಧವಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಲು  ನಾನು ಬಯಸುವುದಿಲ್ಲ. ಇದು ನಮ್ಮ ಮನೆಯ ಚುನಾವಣೆ. ಸ್ನೇಹಯುತ ಪೈಪೋಟಿ ನಡೆಯುತ್ತಿದೆ. ಬೇರೆಯವರನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ ಎಂದು  ಖರ್ಗೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಚುನಾವಣೆ ಯಿಂದ ಗಾಂಧಿ ಕುಟುಂಬ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಕೊಟ್ಟ ಕಾರಣ ನಾನು ಸ್ಪರ್ಧಿಸಲು ನಿರ್ಧರಿಸಿದೆ’ ಎಂದರು.

‘20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಹಲವು ಕಾನೂನು ತಂದು ಬಡವರ ಹೊಟ್ಟೆ ತುಂಬುವ ಆಹಾರ ಭದ್ರತೆ, ಶಿಕ್ಷಣ ಹಕ್ಕು, ನರೇಗಾದಂತಹ ಯೋಜನೆ ತಂದಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗ ಆರು ರಾಜ್ಯ ಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿದ್ದೆವು. ಮೋದಿ ಹಾಗೂ ಅಮಿತ್ ಶಾ ಅವರು ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಒಂದೊಂದಾಗಿ ಸರ್ಕಾರ ಕೆಡವಿದರು’ ಎಂದು ದೂರಿದರು.

ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್‌ಗೆ ಯಾವ ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ, ‘ಇದು ನಮ್ಮ ಮನೆ ವಿಚಾರ. ಇಲ್ಲಿ ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ. ಇದು ಆಂತರಿಕವಾಗಿ ನಡೆಯುತ್ತಿರುವ ಸ್ನೇಹಯುತ ಸ್ಪರ್ಧೆ' ಎಂದರು.

ಪಕ್ಷದ ಪ್ರಾಥಮಿಕ ಸದಸ್ಯನಾಗಿ ಆರಂಭವಾದ ತಮ್ಮ ರಾಜಕೀಯ ಜೀವನ ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ತಂದು ನಿಲ್ಲಿಸಿದೆ.  1970ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗಾಗಿ ಕಾಂಗ್ರೆಸ್ ಆಯೋಜಿಸಿದ್ದ ಮೆಗಾ ರ್ಯಾಲಿಯ ಭಾಗವಾಗಿ, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು, ಕಾರ್ಮಿಕ ನಾಯಕನಾದೆ, ಬಾಲ್ಯದಿಂದಲೂ ತಾವು ನಡೆಸಿದ ಹೋರಾಟದ ಅನುಭವವನ್ನು ಖರ್ಗೆ ಸ್ಮರಿಸಿದರು.

ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಅನುಭವವಿದೆ, ಎರಡು ದಶಕಗಳಿಂದ ಪಕ್ಷವನ್ನು ನಡೆಸಿಕೊಂಡು ಬಂದಿರುವ ಅವರು, ಪಕ್ಷವನ್ನು ಬಲಪಡಿಸುವ ಹಿತದೃಷ್ಟಿಯಿಂದ ಗಾಂಧಿ ಕುಟುಂಬದ ಸಲಹೆಯನ್ನು ಸ್ವೀಕರಿಸಲು ಖಂಡಿತವಾಗಿಯೂ ಹಿಂಜರಿಯುವುದಿಲ್ಲ ಎಂದು ಖರ್ಗೆ ಹೇಳಿದರು.

ಪಕ್ಷವನ್ನು ಹೇಗೆ ಒಗ್ಗೂಡಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಸಾಮೂಹಿಕ ನಾಯಕತ್ವ ಮತ್ತು ಸಮಾಲೋಚನೆಯಲ್ಲಿ ನನಗೆ ನಂಬಿಕೆ ಇದೆ,'' ಎಂದು ಸ್ಪಷ್ಟಪಡಿಸಿದರು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿದಂತೆ ಗಾಂಧಿ ಕುಟುಂಬದವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಸೋನಿಯಾ ಗಾಂಧಿ 20 ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ದೇಶದ ಮೂಲೆ ಮೂಲೆಯೂ ಗೊತ್ತು. ಗಾಂಧಿ ಕುಟುಂಬ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ.  ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗಲೇ ಜೀವ ಕಳೆದುಕೊಂಡಿದೆ. ಅಧಿಕಾರ ಸಿಕ್ಕಾಗ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ. ಜನಪರವಾದ ಹಲವಾರು ಕಾನೂನುಗಳನ್ನು ರೂಪಿಸಿದೆ. ಆ ಕುಟುಂಬದ ಸಲಹೆ ಪಡೆಯುವುದರಲ್ಲಿ ತಪ್ಪೇನು ಇಲ್ಲ ಎಂದರು.

ಗಾಂಧಿ ಕುಟುಂಬ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಅಭಿಪ್ರಾ ಯ ಹೇಳಿದ ಬಳಿಕ ಬಹಳಷ್ಟು ಪ್ರತಿನಿಧಿಗಳು, ಹಿರಿಯ-ಕಿರಿಯ ಕಾರ್ಯಕರ್ತರು ನನ್ನ ಮೇಲೆ ಒತ್ತಡ ಹಾಕಿ ಚುನಾವಣೆಯಲ್ಲಿ ಸ್ರ್ಪಧಿಸುವಂತೆ ಸೂಚಿಸಿದರು. ಆರಂಭದಲ್ಲಿ ಇದು ನನಗೆ ಇಷ್ಟವಿರಲಿಲ್ಲ. ಎಲ್ಲರ ಪ್ರೀತಿಗೆ ಮಣಿದು ಸರ್ಧೆ ಮಾಡಿದ್ದೇನೆ. ತಳಮಟ್ಟದ ಕಾರ್ಯಕರ್ತನಾಗಿ ಸ್ಪರ್ಧೆ ಮಾಡಿದಾಗ ಪ್ರತಿನಿಧಿಗಳ ಬಳಿ ಮತ ಕೇಳುವುದು ನನ್ನ ಕರ್ತವ್ಯ ಎಂದು ಹೇಳಿದರು.

ಈ ಹಿಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆದಾಗ ಆರೇಳು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮತ್ತಿತರ ತನಿಖಾ ಸಂಸ್ಥೆಗಳನ್ನು ಬಳಸಿ ದೇಶದ್ರೋಹದ ಕಾನೂನು ದುರ್ಬಳಕೆ ಮೂಲಕ ಹಣ, ಅಧಿಕಾರದಿಂದ ಶಾಸಕರು, ಸಂಸದರನ್ನು ಎದುರಿಸಿ ಕಾಂಗ್ರೆಸ್ ಸರ್ಕಾರಗಳನ್ನು ಕಿತ್ತೊಗೆದಿದೆ ಎಂದರು.

ರಾಜಕಾರಣದಲ್ಲಿ ನನಗೆ ಯಾರೂ ವಿರೋಧಿಗಳಿಲ್ಲ. ಎಲ್ಲರೂ ಜೊತೆಯಾಗಿ ನಡೆಯುವ ಸಹೋದ್ಯೋಗಿಗಳು. ನಾನು ಎಐಸಿಸಿ ಅಧ್ಯಕ್ಷನಾಗುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎಂದು ಹೇಳಬಯಸುವುದಿಲ್ಲ. ಸ್ಥಳೀಯವಾಗಿ ಈಗಾಗಲೇ ನಮ್ಮ ನಾಯಕರು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com