ಅಂಬೇಡ್ಕರ್ ಕುಟುಂಬ ರಾಜಕೀಯ ಒಪ್ಪುತ್ತಿರಲಿಲ್ಲ, ಪಕ್ಷದಲ್ಲಿ ನನ್ನ ಬಗ್ಗೆ ತಾರತಮ್ಯ, ಖರ್ಗೆಗೆ ಕೆಲವರ ಬಹಿರಂಗ ಬೆಂಬಲ: ಶಶಿ ತರೂರ್ ಕಿಡಿ

ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬಗ್ಗೆ ತಾರತಮ್ಯವಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಲವರು ಬಹಿರಂಗ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಕುಟುಂಬ ರಾಜಕೀಯ ಒಪ್ಪುತ್ತಿರಲಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬಗ್ಗೆ ತಾರತಮ್ಯವಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಲವರು ಬಹಿರಂಗ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಕುಟುಂಬ ರಾಜಕೀಯ ಒಪ್ಪುತ್ತಿರಲಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.

ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ತಮ್ಮ ಹೊಸ ಪುಸ್ತಕ "ಅಂಬೇಡ್ಕರ್: ಎ ಲೈಫ್" ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಸ್ಪರ್ಧಿ ಹಾಗೂ ಸಂಸದ ಶಶಿತರೂರ್, ರಾಜಕೀಯ ನಾಯಕತ್ವವು ಚುನಾವಣೆ ಅಥವಾ ಇತರ ಅರ್ಹತೆಗಳಿಗಿಂತ ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ಕಲ್ಪನೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮ್ಮತಿಸಿ ಸಾಕಷ್ಟು ಟೀಕಿಸಿದ್ದಾರೆ ಎಂದು ಹೇಳಿದ್ದಾರೆ.

ಜಾತಿ ವ್ಯವಸ್ಥೆಯ ತರ್ಕದಿಂದ ಎಂದಿಗೂ ಮನವರಿಕೆಯಾಗದ ಯಾರಿಗಾದರೂ ಅವರು ರಾಜಕೀಯದಲ್ಲಿ ಅಥವಾ ಬೇರೆಲ್ಲಿಯೂ ಕುಟುಂಬದ ಉತ್ತರಾಧಿಕಾರ ತತ್ವವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಂಬೇಡ್ಕರ್ ಅವರು ಅದರ ಬಗ್ಗೆ ಬರೆಯದಿದ್ದರೂ, ರಾಜಕೀಯ ನಾಯಕತ್ವವು ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ಕಲ್ಪನೆಯನ್ನು ಅವರು ಅಸಮ್ಮತಿಸಿದ್ದರು ಮತ್ತು ಸಾಕಷ್ಟು ಟೀಕಿಸುತ್ತಿದ್ದರು ಎಂದು ತರೂರ್ ಹೇಳಿದ್ದಾರೆ. ಕುಟುಂಬಗಳ ಕೈಯಲ್ಲಿ ಅಧಿಕಾರವನ್ನು ಕೇಂದ್ರೀಕರಿಸುವ ಬಗ್ಗೆ ಅಂಬೇಡ್ಕರ್ ಅವರ ಅಭಿಪ್ರಾಯಗಳ ಬಗ್ಗೆ ತರೂರ್ ಹೇಳಿದರು.

ಅಂಬೇಡ್ಕರ್ ಅವರ ಜೀವನದಲ್ಲಿ ನಿಸ್ಸಂದೇಹವಾಗಿ ಸಾಕಷ್ಟು ನೋವುಗಳಿದ್ದವು. ಕಂಟೋನ್ಮೆಂಟ್ ಟೌನ್ ಮ್ಹೋವ್‌ನಲ್ಲಿ ಅಸ್ಪೃಶ್ಯ ಸುಬೇದಾರನ ಮಗ ಅವರಾಗಿದ್ದರು. ಅವರ ಬರಹಗಳು, ಭಾಷಣಗಳ ತೂಕ ಊಹೆಗೂ ನಿಲುಕದ್ದು. ಅವರ ಕಾಲದ ಸಾರ್ವಜನಿಕ ಚರ್ಚೆಗಳು ನಿಜಕ್ಕೂ ರೋಚಕ ಎಂದರು. ಅಲೆಫ್ ಪ್ರಕಟಿಸಿದ "ಅಂಬೇಡ್ಕರ್: ಎ ಲೈಫ್" ಓದುಗರಿಗೆ ಭಾರತೀಯ ಸಂವಿಧಾನದ ಪಿತಾಮಹನ ಬಗ್ಗೆ ತಾಜಾ ಮತ್ತು ಆಳವಾದ ತಿಳುವಳಿಕೆಯನ್ನು ನೀಡುತ್ತದೆ ಎಂದರು.

ಪಕ್ಷದಲ್ಲಿ ನನ್ನ ಬಗ್ಗೆ ತಾರತಮ್ಯ, ಖರ್ಗೆಗೆ ಕೆಲವರ ಬಹಿರಂಗ ಬೆಂಬಲ
ಬಳಿಕ ದೆಹಲಿಯ ಪ್ರದೇಶ ಕಾಂಗ್ರೆಸ್‌ ಕಮಿಟಿಯೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಶಶಿತರೂರ್ ಅವರು, ಕೆಲವು ನಾಯಕರು ನನ್ನ ಬಗ್ಗೆ ತಾರತಮ್ಯ ಎಸಗುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರಕ್ಕೆ ಬಂದರೆ ಎಲ್ಲಾ ನಾಯಕರು ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಾರೆ. ಬಹಿರಂಗವಾಗಿ ಅವರಿಗೆ ಬೆಂಬಲ ಸೂಚಿಸುತ್ತಾರೆ. ನನ್ನ ಸಭೆಗೆ ಯಾರೂ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೋಕ್ಷವಾಗಿ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೂಟ್ ರ ಮಲ್ಲಿಕಾರ್ಜುನಖರ್ಗೆಗೆ ಬೆಂಬಲ ಸೂಚಿಸುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ತರೂರ್, 'ನಾನು ಪಕ್ಷದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದೇನೆ. 2014 ಮತ್ತು 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ನಿಲ್ಲದ ಮತದಾರರನ್ನು ಸಹ ನಾನು ಪಕ್ಷದ ಬೆಂಬಲಕ್ಕೆ ತರಲು ಪ್ರಯತಿಸುತ್ತಿದ್ದೇನೆ ಎಂದು ಹೇಳಿದರು. ಪಕ್ಷದ ಪ್ರತಿನಿಧಿಗಳ ಪಟ್ಟಿಅಪೂರ್ಣತೆಯಿಂದ ಕೂಡಿದೆ. ಕೆಲವೊಂದರಲ್ಲಿ ಪ್ರತಿನಿಧಿಗಳ ಹೆಸರಿದ್ದರೆ, ಸಂಪರ್ಕ ಸಂಖ್ಯೆಗಳಿಲ್ಲ. ಹಾಗಾಗಿ ಎಲ್ಲರನ್ನು ಭೇಟಿ ಮಾಡಲು ನನಗೆ ಕಷ್ಟವಾಗುತ್ತಿದೆ. 22 ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಇಂತಹವುಗಳು ಉಂಟಾಗಿವೆ. ಇವುಗಳೆಲ್ಲವನ್ನು ಸರಿಪಡಿಸುತ್ತೇನೆ ಎಂದು ಅವರು ಹೇಳಿದರು. 

ಅ.17ರಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಅ.19ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸೆಪ್ಟಂಬರ್ 22ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಉಳಿದವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆಯಂತೆ ಈ ಚುನಾವಣೆ ನಡೆದಿದೆ. ಅಲ್ಲದೆ, 22 ವರ್ಷ ನಂತರ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com