ದೊಡ್ಡಬಳ್ಳಾಪುರದಲ್ಲಿ ನಾಳೆ ಬಿಜೆಪಿ 'ಜನಸ್ಪಂದನ ಸಮಾವೇಶ; 3 ಲಕ್ಷ ಜನ ಆಗಮಿಸುವ ನಿರೀಕ್ಷೆ: ಡಾ. ಕೆ. ಸುಧಾಕರ್ 

ಬಿಜೆಪಿ ರಾಜ್ಯ ಸರಕಾರದ 3 ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಜನೋತ್ಸವಕ್ಕೆ ಬದಲು ಜನಸ್ಪಂದನ ಸಮಾವೇಶವನ್ನು ನಾಳೆ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಡಾ. ಕೆ. ಸುಧಾಕರ್ ಸುದ್ದಿಗೋಷ್ಠಿ
ಡಾ. ಕೆ. ಸುಧಾಕರ್ ಸುದ್ದಿಗೋಷ್ಠಿ

ದೊಡ್ಡಬಳ್ಳಾಪುರ: ಬಿಜೆಪಿ ರಾಜ್ಯ ಸರಕಾರದ 3 ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಜನೋತ್ಸವಕ್ಕೆ ಬದಲು ಜನಸ್ಪಂದನ ಸಮಾವೇಶವನ್ನು ನಾಳೆ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

“ಜನಸ್ಪಂದನ” ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, 2 ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. 2 ವರ್ಷಗಳಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್‍ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುವುದಾಗಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲ್ಲೂಕುಗಳಿಂದ ಜನರು ಬರಲಿದ್ದು, ಬಿಜೆಪಿಯ ದೊಡ್ಡ ಜನಸಭೆ ಇದಾಗಲಿದೆ. ರಾಜ್ಯದ ಆರು ವಲಯಗಳಲ್ಲಿ ಇಂಥ ಜನಸಭೆ ಏರ್ಪಡಿಸಲಾಗುವುದು. ಈ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಪ್ರಶ್ನಿಸುವವರಿಗೆ ಇದು ಉತ್ತರ ನೀಡಲಿದೆ ಎಂದು ಹೇಳಿದರು.

40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಇದರ ಗುತ್ತಿಗೆ ಕೊಡಲಾಗಿದೆ ಎಂದು ವಿವರ ನೀಡಿದರು.

3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಷಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12 ಕಡೆ ಜಾಗಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಿದ್ದು, ಮನವಿ ಮಾಡಿದ್ದೇವೆ ಎಂದರು.

ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಬೆಂಗಳೂರು ಮತ್ತು ಇತರ ಕಡೆಗಳಲ್ಲಿ ಅತಿವೃಷ್ಟಿಯನ್ನು ಸವಾಲಾಗಿ ಸ್ವೀಕರಿಸಿ ಸಿಎಂ ಮತ್ತು ಜನಪ್ರತಿನಿಧಿಗಳು ಅಹರ್ನಿಶಿ ದುಡಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಒತ್ತುವರಿಯು ದೀರ್ಘಕಾಲದ ಸಮಸ್ಯೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಹಿಂದಿನ ಸರಕಾರಗಳ ಬಳುವಳಿ ಇದು ಎಂದರು.

ಕಾಂಗ್ರೆಸ್‍ನ ಸಿದ್ದರಾಮಯ್ಯ ವೈಯಕ್ತಿಕ ಕಾರ್ಯಕ್ರಮ ಮಾಡಿಕೊಂಡರು. ನಾವು ಅದಕ್ಕೂ ಮೊದಲೇ ಯೋಜನೆ ಮಾಡಿದ್ದೆವು. ನಾವು ಕಾರ್ಯಕರ್ತನ ಹತ್ಯೆ ಕಾರಣಕ್ಕೆ ಕಾರ್ಯಕ್ರಮ ಮುಂದೂಡಿದ್ದೇವೆ. ಅವರೇನು ಮಾಡಿದರು? ಯಾರು ಸತ್ತರೂ, ನೆರೆ ಬಂದರೂ ಕಾಂಗ್ರೆಸ್ ಪಕ್ಷದವರಿಗೆ ಏನೂ ಲೆಕ್ಕ ಇಲ್ಲ ಎಂದರು. ನಾವೇನು ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರ ಬರ್ತ್‍ಡೇ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದರು.

ಏನು ಮಾಡಿದ್ದಾರೆ, ಏನು ಮಾಡುವವರಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರೇ ನಾಳೆ ತಿಳಿಸಲಿದ್ದಾರೆ. ನಾಳೆವರೆಗೆ ಕಾಯಿರಿ. ಕೊನೆಯ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com