ಬೆಂಗಳೂರು: ಕಾಂಗ್ರೆಸ್ ನವರು ಕೆಳಹಂತಕ್ಕೆ ಹೋಗಿ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು ಎಂದು ಇಡೀ ದೇಶದ ಜನತೆಗೆ ಇಂದು ಗೊತ್ತಾಗಿದೆ. ಇಂದು ಇಡೀ ದೇಶದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ, ಅವರ ಹತಾಶೆಯ ಮನೋಭಾವ ತೋರಿಸುತ್ತಿದ್ದಾರೆ ಎಂದು ಪೇ ಸಿಎಂ ಪೋಸ್ಟರ್ ವಿವಾದ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೈಯಕ್ತಿಕ ರಾಜಕೀಯ ಲಾಭಕೋಸ್ಕರ ಪೇ ಸಿಎಂ ಎಂಬ ಪೋಸ್ಟರ್ ಅಭಿಯಾನವನ್ನು ಕಾಂಗ್ರೆಸ್ ನವರು ರಾಜಕೀಯ ದುರುದ್ದೇಶಕ್ಕೋಸ್ಕರ ಮಾಡುತ್ತಿದ್ದಾರೆ, ಇವರಲ್ಲಿ ಎಷ್ಟು ಮಂದಿ ಜೈಲಿಗೆ ಹೋಗಿ ಬಂದಿಲ್ಲ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರಿಗೆ ಮಾತನಾಡಲು ನಾಚಿಕೆಯಾಗಬೇಕು ಎಂದು ಹರಿಹಾಯ್ದರು.
40 ಪರ್ಸೆಂಟ್ ಎಂದರೆ ಅಷ್ಟು ಕಮಿಷನ್ ಕೊಡಲು ಸಾಧ್ಯವಿದೆಯೇ, ಜನ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ, ಕರ್ನಾಟಕ ರಾಜಕೀಯವನ್ನು ಕಾಂಗ್ರೆಸ್ ನವರು ಮಣ್ಣುಪಾಲು ಮಾಡುತ್ತಿದ್ದಾರೆ. ಅವರು ಏನು ಮಾಡಿದರೂ ಮುಂದಿನ ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಕಳೆದ 14 ತಿಂಗಳುಗಳಿಂದ ಬೊಮ್ಮಾಯಿಯವರು ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಶುದ್ಧ ಆಡಳಿತ ನೀಡುತ್ತಾ ಬಂದಿದ್ದಾರೆ. ಉತ್ತಮ ಆಡಳಿತ ಕೊಡುವುದನ್ನು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕಾಂಗ್ರೆಸ್ ನವರು ಇದೇ ರೀತಿ ಮಾಡಿದರು. ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳಿದ್ದರೆ ಈ ರೀತಿ ಗುರಿಯಾಗಿಸುತ್ತಾರೆ. ಕೆಂಗಲ್ ಹನುಮಂತಯ್ಯನವರನ್ನೂ ಬಿಟ್ಟಿಲ್ಲ. ಸಮಾಜದ ಮುಂಚೂಣಿ ಸಮುದಾಯದವರು ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ನವರು ಹೀಗೆ ಮಾಡುತ್ತಿದ್ದಾರೆ. ಶೇಕಡಾ 1,2ರಷ್ಟು ಅವರಿಗಿದ್ದ ಅವಕಾಶವನ್ನು ಕಳೆದುಕೊಂಡಿದ್ದಾರೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಸ್ಟರ್ ಅಂಟಿಸುವುದು ನೋಡಿದ್ದೀರಾ ಎಂದು ಕೇಳಿದರು.
ಮುನಿಯಪ್ಪ ಭೇಟಿ: ಕೋಲಾರದ ಕಾಂಗ್ರೆಸ್ ನಾಯಕ ಕೆ ಹೆಚ್ ಮುನಿಯಪ್ಪನವರು ಖಾಸಗಿ ವಿಷಯಕ್ಕೆ ನನ್ನನ್ನು ಇಂದು ಬಂದು ಭೇಟಿ ಮಾಡಿದ್ದಾರೆ. ನಮ್ಮ ವೈಯಕ್ತಿಕ ವಿಷಯಗಳಿಗೆ ನಾವು ಬಂದು ಹೋಗುತ್ತಿರುತ್ತೇವೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ, ನೋಡೋಣ ಮುಂದೆ ಏನಾಗುತ್ತದೋ ಎಂದು, ನಾನು ಆಶಾದಾಯಕವಾಗಿದ್ದೇನೆ, ಭವಿಷ್ಯವಾಣಿ ನುಡಿಯಲು ನಾನು ಜ್ಯೋತಿಷ್ಯ ಕಲಿತಿಲ್ಲ ಎಂದು ಸುಧಾಕರ್ ನಗುತ್ತಾ ಮಾರ್ಮಿಕವಾಗಿ ನುಡಿದರು.
ಉತ್ತಮ ನಾಯಕರು ಬೇರೆ ಪಕ್ಷಗಳಿಂದ ಬಂದು ನಮ್ಮ ಪಕ್ಷ ಬಲವಾದರೆ ಏಕೆ ಪ್ರಯತ್ನ ಮಾಡಬಾರದು ಎಂದು ಕೇಳಿದರು.
Advertisement