ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಆರಂಭಿಸಿರುವ ‘ಪೇಸಿಎಂ ಪೋಸ್ಟರ್’ ಅಭಿಯಾನ ಶುಕ್ರವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ವತಃ ಪೋಸ್ಟರ್ ಅಂಟಿಸಲು ಮುಂದಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ರೇಸ್ ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಂಟಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.
ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ರಂದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಡಳಿತಾರೂಢ ಬಿಜೆಪಿಯ ನಾಯಕರು ಬಿಲ್ಡರ್‌ಗಳು, ಗುತ್ತಿಗೆದಾರರು ಮತ್ತು ಇತರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪಗಳ ಭಾಗವಾಗಿ ಕಾಂಗ್ರೆಸ್ , ಪೇ ಸಿಎಂ ಅಭಿಯಾನ ನಡೆಸಿ ಪೋಸ್ಟರ್ ಹಂಚಲು ಮುಂದಾಗಿತ್ತು. ಈ ಪ್ರತಿಭಟನೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಈ ವಾರದ ಆರಂಭದಲ್ಲಿ, ಇ-ವ್ಯಾಲೆಟ್ ಪೇಟಿಎಂ ವಿನ್ಯಾಸವನ್ನು ಹೋಲುವ ಪೋಸ್ಟರ್‌ಗಳು ಮತ್ತು ಕ್ಯೂಆರ್ ಕೋಡ್‌ನಲ್ಲಿ ಸಿಎಂ ಬೊಮ್ಮಾಯಿ ಅವರ ಭಾವಚಿತ್ರವನ್ನು ಬಿಂಬಿಸಿ “ಇಲ್ಲಿ 40% ಸ್ವೀಕರಿಸಲಾಗಿದೆ” ಎಂಬ ಸಂದೇಶದೊಂದಿಗೆ ಬೆಂಗಳೂರಿನಾದ್ಯಂತ ಪೋಸ್ಟರ್ ಕಾಣಿಸಿಕೊಂಡಿತ್ತು. ಈ ಬಗ್ಗೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿತ್ತು.
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಾದ್ಯಂತ ಈ ಪೋಸ್ಟರ್ ಅಭಿಯಾನ ಮುಂದುವರಿಸೋದಾಗಿ ಹೇಳಿದ್ದಾರೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗುತ್ತಿಗೆಗಳಲ್ಲಿ ಶೇ. 40ರಷ್ಟು ಕಮಿಷನ್ ಕೇಳಿದ್ದರು ಎಂದು ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಕಳೆದ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತ್ತು.
Advertisement