ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹಲವರ ಹೆಸರು ಕೈ ಬಿಡಲಾಗಿದೆ: ಬಿಬಿಎಂಪಿ ವಾರ್ಡ್ ವಿಂಗಡಣೆ ಬಗ್ಗೆ ಡಿಕೆಶಿ ಕಿಡಿ!

ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಮತದಾರರ ಹಲವು ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಮತದಾರರ ಹಲವು ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಎಷ್ಟು ಮಂದಿಯನ್ನು ಕೈಬಿಟ್ಟಿದ್ದಾರೆಂಬ ಅಧಿಕೃತ ದಾಖಲೆ ನಮ್ಮ ಬಳಿ ಇದೆ. ಆದಷ್ಟುಬೇಗ ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್‌ ಬಗ್ಗೆ ಒಲವಿರುವ ಹಿಂದುಳಿದ ವರ್ಗ, ಪರಿಶಿಷ್ಟ ಮತದಾರರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರು ಇಂತಹ ಎಷ್ಟೇ ಷಡ್ಯಂತ್ರ ನಡೆಸಿದರೂ ಮುಂದಿನ ಚುನಾವಣೆ ಗೆಲ್ಲುವುದಿಲ್ಲ ಎಂಬುದು ಸ್ಪಷ್ಟಎಂದರು.

ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಎಲ್ಲೆಡೆ ಮತದಾರರ ಪಟ್ಟಿ ಪರಿಶೀಲಿಸಿ, ಅಕ್ರಮಗಳು ನಡೆದಿರುವ ಕಡೆ ಆಕ್ಷೇಪಣೆ ಸಲ್ಲಿಕೆ ಮಾಡಿ ಎಂದು ಸೂಚಿಸಿದ್ದೇವೆ. ಈ ಬಗ್ಗೆ ಸದ್ಯದಲ್ಲೇ ಪ್ರತ್ಯೇಕ ಸಭೆ ನಡೆಸಿ ಬಿಜೆಪಿಯವರು ಮಾಡಲು ಯತ್ನಿಸುತ್ತಿರುವ ಅನ್ಯಾಯವನ್ನು ತಡೆಯಲಾಗುವುದು ಎಂದರು.

ಬಿಬಿಎಂಪಿ ಮೀಸಲಾತಿ ಬಗ್ಗೆಯೂ ಆಕ್ಷೇಪ ಸಲ್ಲಿಸಬೇಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಒಂದು ಆಕ್ಷೇಪಣೆಗೂ ಸರ್ಕಾರ ಸ್ಪಂದಿಸಿಲ್ಲ. ಯಾರ ಅಭಿಪ್ರಾಯವನ್ನೂ ಆಲಿಸದೆ ಸರ್ಕಾರ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿದೆ.

ಬಿಜೆಪಿ ಶಾಸಕರು, ಸಂಸದರು ಸಂಘ ಪರಿವಾರದ ಕಚೇರಿಗಳಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಹೀಗಾಗಿ ಆಕ್ಷೇಪಗಳನ್ನು ಕೇಳುವ ಸೌಜನ್ಯವನ್ನೂ ಅವರು ತೋರಿಸಿಲ್ಲ. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ತಪ್ಪಿ ಹೋದರೆ ಪ್ರಶ್ನಿಸುವುದು ಆತನ ಹಕ್ಕು. ಯಾರಿಗೂ ಮೂಲಭೂತ ಮತದಾನದ ಹಕ್ಕನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
 
ರಾಜ್ಯ ಸರಕಾರ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿಯಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ.ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ಪ್ರತಿಭಟಿಸಿ, ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಬಿಜೆಪಿ ಕಚೇರಿ ಎಂದು ನಮ್ಮ ಪಕ್ಷದ ಮುಖಂಡರು ನಾಮಫಲಕ ಹಾಕಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಮಾಡಿದ್ದು ತಪ್ಪು ಎಂದು ಹೇಳಬೇಕಾಗಿರುವುದು ವಿಪಕ್ಷವಾಗಿ ನಮ್ಮ ಕರ್ತವ್ಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದವರು ಹಾಗೂ ಮಹಿಳೆಯರಿಗೆ ನೀಡಬೇಕಾದ ಮೀಸಲಾತಿಯನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಬೊಮ್ಮನಹಳ್ಳಿ ಕ್ಷೇತ್ರದ 14 ವಾರ್ಡ್‍ಗಳ ಪೈಕಿ 9 ವಾರ್ಡ್‍ಗಳಿಗೆ ಮಹಿಳಾ ಮೀಸಲಾತಿ ನೀಡಿದ್ದಾರೆ' ಎಂದು ದೂರಿದರು.

‘ಜಯನಗರದಲ್ಲಿ 9 ವಾರ್ಡ್‍ಗಳ ಪೈಕಿ ಎಂಟು ವಾರ್ಡ್, ಬಿಟಿಎಂ ಲೇಔಟ್‍ನಲ್ಲಿ 8 ವಾರ್ಡ್ ಹಾಗೂ ಗಾಂಧಿ ನಗರದಲ್ಲಿ 7ಕ್ಕೆ 7 ವಾರ್ಡ್‍ಗಳಲ್ಲಿ, ಚಾಮರಾಜಪೇಟೆಯ 6 ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಒಟ್ಟು 93 ವಾರ್ಡ್‍ಗಳ ಪೈಕಿ 76 ಕಡೆ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಇದು ನ್ಯಾಯವೋ, ಅನ್ಯಾಯವೋ ನೀವೇ ತೀರ್ಮಾನಿಸಿ' ಎಂದು ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com