ತ್ರಿವರ್ಣ ಧ್ವಜ ಹಿಡಿಯಲು ನಮಗಿರುವಷ್ಟು ಹಕ್ಕು ಬೇರೆಯವರಿಗಿಲ್ಲ; ಗಾಂಧೀಜಿ ಸಂಸ್ಕೃತಿ, ನೆಹರೂ ಸಂಪ್ರದಾಯ ಪಾಲನೆ: ಡಿಕೆಶಿ

ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ ದೂರ ಪಾದಯಾತ್ರೆ ಮೂಲಕ ಸ್ವಾತಂತ್ರ್ಯ ಅಮೃತಮಹೋತ್ಸವನ್ನು ಆಚರಿಸುತ್ತಿದ್ದೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ ದೂರ ಪಾದಯಾತ್ರೆ ಮೂಲಕ ಸ್ವಾತಂತ್ರ್ಯ ಅಮೃತಮಹೋತ್ಸವನ್ನು ಆಚರಿಸುತ್ತಿದ್ದೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಆ.15 ರಂದು ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. 1 ಲಕ್ಷ ಜನ ರಾಷ್ಟ್ರಧ್ವಜ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆ ಮಾಡಲಾಗುವುದು. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ವರ್ಗದ ಜನರು ಕುಟುಂಬ ಹಾಗೂ ಸ್ನೋಹಿತರ ಸಮೇತ ಭಾಗವಹಿಸಬಹುದು. ಜನರಿಗೆ ಅನುಕೂಲವಾಗುವಂತೆ ರೈಲ್ವೇ, ಬಸ್ ಹಾಗೂ ಮೆಟ್ರೋ ನಿಲ್ದಾಣದ ಬಳಿ ಇರುವ ಕೇಂದ್ರಗಳನ್ನೇ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಶೇ.50ರಷ್ಟು ರಿಯಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರ ಬಳಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಪಾದಯಾತ್ರೆ ನಂತರ ಸಂಜೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹರಿಹರನ್ ಅವರ ತಂಡದಿಂದ ದೇಶಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾಂತಂತ್ರ್ಯದ ಶತಮಾನೋತ್ಸವಕ್ಕೆ ಯಾರು ಇರುತ್ತೇವೋ, ಇರುವುದಿಲ್ಲವೋ ಗೊತ್ತಿಲ್ಲ. ಹೀಗಾಗಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.

ಈ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕರು ಬರುತ್ತಿದ್ದು, ಯಾರು ಬರಲಿದ್ದಾರೆ ಎಂದು ಅವರೇ ಘೋಷಣೆ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅಧಿಕಾರಕ್ಕಾಗಿ ಕಾಂಗ್ರೆಸ್ ಈ ಕಾರ್ಯಕ್ರಮ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವಂತೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟಿದ್ದೆ ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಇಲ್ಲದಿದ್ದರೆ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಮೋದಿ ಅವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ಪ್ರಶ್ನಿಸಿದರು.

ಈಗಿನ ಯಾವುದೇ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಈಗ ಲೂಟಿ ಮಾಡುವವರು ಇದ್ದಾರೆ ಎಂದಿದ್ದ ಹೆಚ್ ಡಿಕೆ ಟೀಕೆಗೆ ಅವರು ಏನಾದರೂ ಹೇಳಲಿ, ನಾವು ಗಾಂಧೀಜಿ ಅವರ ಸಂಸ್ಕೃತಿ, ನೆಹರೂ ಅವರ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದೇವೆ. ಈ ಧ್ವಜವನ್ನು ಹಿಡಿಯಲು ನಮಗಿರುವಷ್ಟು ಹಕ್ಕು ಬೇರೆಯವರಿಗಿಲ್ಲ ಎಂದರು.

ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ಹೇಗೇ ಇದ್ದರೂ ಚುನಾವಣೆಗೆ ಸಿದ್ಧವಾಗಿ ಎಂದು ನಮ್ಮ ನಾಯಕರಿಗೆ ಹೇಳಿದ್ದೇನೆ. ನಮ್ಮ ಹಲವು ಪ್ರಮುಖ ನಾಯಕರೆಲ್ಲರೂ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದರು. ಇದು ಸಣ್ಣ ಚುನಾವಣೆ ಅಲ್ಲ, ದೊಡ್ಡ ಚುನಾವಣೆ ನೀವು ಕೂಡ ನಾಯಕರಾಗಿ ಎಂದು ನಮ್ಮ ಪಕ್ಷದವರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

ನಾನು ನಿನ್ನೆಯಿಂದ ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಶಾಸಕರು ಇಲ್ಲದ ಕಡೆಗಳಲ್ಲಿ ಭೇಟಿ ನೀಡುತ್ತಿದ್ದೇನೆ. ಆ ಮೂಲಕ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದು, ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಪಾಲಿಕೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com