ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ? 'ನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ, ನಿಮ್ಮ ಕಂಪನಿಗಳ ಕಥೆ ಬಿಚ್ಚಬೇಕೆ ಡೀಲ್‌ ಅಶ್ವತ್ಥನಾರಾಯಣ?

ನಕಲಿ ಸರ್ಟಿಫಿಕೇಟ್‌ ರಾಜʼನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ, ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು,
Published on

ಬೆಂಗಳೂರು: ನಕಲಿ ಸರ್ಟಿಫಿಕೇಟ್‌ ರಾಜʼನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ. ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ವಿರುದ್ಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ಮಾಜಿ ಸಿಎಂ, ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್‌ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎಂದಿದ್ದಾರೆ.

ಕರಾವಳಿ ಕೊಲೆಗಳು, ಮಳೆ-ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದೇನೆ, ನಿಜ. ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಉನ್ನತ ಶಿಕ್ಷಣದ ಹುಳುಕು ಹೊರ ಬಂದಾವೆಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ʼಸರ್ಟಿಫಿಕೇಟ್‌ ಕೋರ್ಸ್‌ʼಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ ಎಂದು ಪ್ರಶ್ನಿಸಿದ್ದಾರೆ.

ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ? ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು? ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಅಶ್ವತ್ಥನಾರಾಯಣ ಎಂದು ಎಚ್ ಡಿಕೆ ಲೇವಡಿ ಮಾಡಿದ್ದಾರೆ.

ನನ್ನ ಸರಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ, ಪಠ್ಯ ಪರಿಷ್ಕರಣೆ ಮಾಡಿದಿರಲ್ಲ. ದಾದಿಯರ ನಕಲಿ ಸರ್ಟಿಫಿಕೇಟ್‌ ಸೃಷ್ಟಿ ಹೇಗೆ? ಆಪರೇಷನ್‌ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್‌ ಅಶ್ವತ್ಥನಾರಾಯಣ ಎಂದು ಕೇಳಿದ್ದಾರೆ.

ಕಾಲು ಸುಂಕದ ರಸ್ತೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕನಿಷ್ಠ ಪಾಪಪ್ರಜ್ಞೆಯೂ ಇಲ್ಲವೇ ನಿಮಗೆ? ಆಕಾಶದಲ್ಲಿ ಹಾರಾಡುವ ನಿಮಗೆ ಕಾಲು ಸುಂಕದ ಕಷ್ಟ ಅರ್ಥವಾದೀತೆ ಅಶ್ವತ್ಥನಾರಾಯಣ? ಮಳೆ ನೆರೆಯಿಂದ ಕರ್ನಾಟಕ ಕಣ್ಣೀರ ಕಡಲಾಗಿರುವುದು ಕಾಣುತ್ತಿಲ್ಲವೇ? ನಾನು ಎರಡನೇ ಸಲ ಸಿಎಂ ಆದಾಗ 800 ಕಾಲು ಸುಂಕ ಸೇತುವೆಗಳ ನಿರ್ಮಾಣಕ್ಕೆ ಆದೇಶಿಸಿದ್ದೆ. ಅವುಗಳಲ್ಲಿ ಎಷ್ಟು  ಪೂರ್ಣಗೊಳಿಸಿದ್ದೀರಿ? 3 ವರ್ಷಗಳ ನಿಮ್ಮ ಸರಕಾರದಲ್ಲಿ ಇಂಥಾ ಎಷ್ಟು ಸೇತುವೆ ನಿರ್ಮಿಸಿದ್ದೀರಿ? ಒಂದು ಮುಗ್ಧ ಸಾವು ನಿಮ್ಮ ಮನ ಕಲಕಲಿಲ್ಲವಲ್ಲಾ.. ನಾಚಿಕೆ ಆಗುವುದಿಲ್ಲವೇ ಉನ್ನತ ಶಿಕ್ಷಣ ಸಚಿವರೇ?

ಪರೇಷನ್‌ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ, ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳೀತು? ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ʼಠಮ ಠಮ ಠಮʼ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ?

ಜೆಡಿಎಸ್‌ ಕಂಪನಿ ಎನ್ನುತ್ತೀರಿ! ನಿಮ್ಮ ಕಂಪನಿಗಳ ಕಥೆ ಬಿಚ್ಚಬೇಕೆ? ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ. ಎರಡು ತಲೆಯ ಕುಶಲತೆಯನ್ನು ಎಲ್ಲಿಂದ ಕಲಿತಿರಿ? ಸಂಘದಿಂದ ಬಂದ ಸಂಸ್ಕಾರವೇ? ಅಥವಾ ತಮ್ಮ ಹಿನ್ನೆಲೆಯೇ ಇದಾ? ನಿಮ್ಮ ನೈಜ ಹಿನ್ನೆಲೆಯ ಪುರಾಣ ಗೊತ್ತಿದ್ದವರಿಗೆ ಇದೇನು ಅಚ್ಚರಿಯಲ್ಲ ಬಿಡಿ ಅಶ್ವತ್ಥನಾರಾಯಣ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಕುಮಾರಸ್ವಾಮಿ. ಜೆಡಿಎಸ್ ಕಂಪನಿ ಇರಲಿ, ನಿಮ್ಮ ಕಂಪನಿಗಳ ಬಗ್ಗೆಯೇ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತು ಎಂಬುದನ್ನು ಮರೆಯಬೇಡಿ . ಚುನಾವಣೆ ಬರಲಿ, ಕಂಪನಿಗಳ ಕಲರವ ಮತ್ತು ʼಠಮ ಠಮ ಠಮʼ ಸದ್ದು ಏನೆಂಬುದನ್ನು ರಾಮನಗರದಲ್ಲಿ ಕೇಳುವಂತೆ ಮಾಡುತ್ತೇನೆ, ಪಿಎಸ್‌ಐ ಅಕ್ರಮ, ಪ್ರಾಧ್ಯಾಪಕರ ಕರ್ಮಕಾಂಡ, ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್‌ ಮಾಡುವ ಅಶ್ವತ್ಥನಾರಾಯಣ, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ? ಇದೇನಾ ಸಂಘ‌ ಕಲಿಸಿದ ಶಿಕ್ಷಣ? ಹೇಳಿ ಡೀಲ್‌ ಅಶ್ವತ್ಥನಾರಾಯಣ ಎಂದು ಎಚ್.ಡಿಕೆ ತಪರಾಕಿ ಹಾಕಿದ್ದಾರೆ.ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com