ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: ಸಿದ್ದು ವಿರುದ್ಧ ಎಚ್ ಡಿಕೆ ತೀವ್ರ ಕಿಡಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯ ಹೋರಾಟದ ಹೇಳಿಕೆಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯ ಹೋರಾಟದ ಹೇಳಿಕೆಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಅವರು, 'ಅಧಿಕಾರದ ದುರಾಸೆಗೆ ಅನ್ಯಪಕ್ಷಗಳನ್ನು ನಂಬಿಸಿ ಕತ್ತು ಕುಯ್ಯವ ಕಾಂಗ್ರೆಸ್ ಪಕ್ಷ ಎಸಗಿದ ಪಾಪಕ್ಕೆ ಈಗ ಫಲ ಉಣ್ಣುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಗಲಾಡಿ ಸಿದ್ದರಾಮಾಯಣ ಶುರುವಾಗಿದೆ. ಈ ಸೋಗಲಾಡಿ ಸಿದ್ದಯ್ಯನ ಅಸಲಿಯೆತ್ತು ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ನಿಮ್ಮಂತಹ ರಾಜಕೀಯ ಭಸ್ಮಾಸುರರು ಇರುವ ಕಾಂಗ್ರೆಸ್ ಪಕ್ಷದ ಹತ್ತಿರಕ್ಕೆ ಬಂದವರೆಲ್ಲ ಸುಟ್ಟು ಭಸ್ಮವಾಗಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ 'ನಮ್ಮ ಪಕ್ಷ ಇರಲಿ, ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆ ಗತಿ ಏನಾಯಿತು? ಯುಪಿಎ-1 ಸರಕಾರಕ್ಕೆ ಬೆಂಬಲ ಕೊಟ್ಟ ತಪ್ಪಿಗೆ 65 ಕ್ಷೇತ್ರ ಗೆದ್ದಿದ್ದ ಕಮ್ಯುನಿಸ್ಟರು ಈಗೆಲ್ಲಿದ್ದಾರೆ? ನಿಮ್ಮ ಸಹವಾಸ ಮಾಡಿದವರಿಗೆಲ್ಲ ಇದೇ ಗತಿ! ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್ ಬಗ್ಗೆ ವಿಷ ಕಾರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ್ದು ಇರಲಿ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ವಿಕಿಪೀಡಿಯಾ ಪ್ರಕಾರ ನಿಮ್ಮ ಜನ್ಮವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ? ಗೆದ್ದಲು ಕಟ್ಟಿಕೊಂಡ ಹುತ್ತಕ್ಕೆ ಹಾವಿನಂತೆ ಸೇರಿಕೊಂಡ ನೀವು, ಸ್ವಾರ್ಥ ಬೀಜಾಸುರನಾಗಿ ಆ ಪಕ್ಷದ ಮೂಲ ನಾಯಕರನ್ನೆಲ್ಲ ನುಂಗುತ್ತಿರುವ ನಿಮ್ಮ ಭಕಾಸುರ ಬಾಯಲ್ಲಿ ಸ್ವಾತಂತ್ರ್ಯ ಹೋರಾಟದ ಪಾರಾಯಣವೇ? ನಿಮಗೆ ಅದು ಬೇರೆ ಕೇಡು. ನೀವು ಹೇಳಿದ ಕಾಂಗ್ರೆಸ್ ಈಗೆಲ್ಲಿದೆ? ನೀವು ಕದ್ದಮಾಲು ಹ್ಯೂಬ್ಲೆಟ್ ವಾಚು ಕಟ್ಟಿದಾಗಲೇ 1947ರ ಕಾಂಗ್ರೆಸ್ ಗೆ ಸಮಾಧಿ ಕಟ್ಟಿದಿರಿ. 5 ವರ್ಷಗಳ ನಿಮ್ಮ ಆಡಳಿತದಲ್ಲಿ ಆ ನತದೃಷ್ಟ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸಾವಿನ ಮೊಳೆ ಹೊಡೆದಿರಿ, ಲೆಕ್ಕ ಹೇಳಬೇಕೆ ಮಿಸ್ಟರ್ ಸಿದ್ದರಾಮಯ್ಯ? ಎಂದು ಸವಾಲು ಹಾಕಿದ್ದಾರೆ.

ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ಪಕ್ಷವನ್ನು ನೀವೆಲ್ಲಾ ಸೇರಿ ಎಂದೋ ಮುಗಿಸಿದಿರಿ. ಅದಕ್ಕೆ ಸಮಾಧಿಯೂ ಕಟ್ಟಿ ತಿಥಿ ಊಟವನ್ನೂ ಮಾಡಿದ್ದೀರಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೇಳಿದ ತಲೆ ತಲೆಮಾರುಗಳ ಲೂಟಿ ಕಾಂಗ್ರೆಸ್ ಮಾತ್ರವಷ್ಟೇ ಈಗ ಉಳಿದಿರುವುದು. ಗಾಂಧಿ ಹೆಸರೇಳಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹೊಂಚು ಹಾಕುತ್ತಿದ್ದೀರಿ. ಇನ್ನೆಷ್ಟು ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆಯಬೇಕು ಮಿಸ್ಟರ್ ಸಿದ್ದರಾಮಯ್ಯ? ಅಧಿಕಾರಕ್ಕಾಗಿ ಸ್ವಾತಂತ್ರ್ಯ ಹೋರಾಟದ ಜಪವೇ? ನೇರವಾಗಿ ಕುರ್ಚಿ ಜಪವನ್ನೇ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಬಿಜೆಪಿಯ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಟೀಕಿಸುವ ಭರದಲ್ಲಿ ಜೆಡಿಎಸ್ ಅನ್ನು ಕೂಡ ಟೀಕಿಸಿದ್ದರು. 'ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್‌ನಿಂದಲೇ ಆಗಿದೆ. ಇಡೀ ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಗಾಂಧೀಜಿ, ತಿಲಕರು ಸೇರಿದಂತೆ ಇನ್ನಿತರ ನಾಯಕರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನದಿಂದ ಈ ಸ್ವಾತಂತ್ರ್ಯ ಬಂದಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ಬಾವುಟದ ಸಂಕೇತವಾಗಿದ್ದು, ಇದೇ ಧ್ವಜವನ್ನು ಸಾವರ್ಕರ್‌ ವಿರೋಧ ಮಾಡಿದ್ದರು. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲರೂ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್‍ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. 1925ರಲ್ಲಿ ಆರ್‌ಎಸ್‍ಎಸ್ ಪ್ರಾರಂಭವಾಯಿತು. ಹೆಡ್ಗೇವಾರ್ ಇದರ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಗಿದ್ದು. ಸ್ವಾತಂತ್ರ್ಯ ಬಂದ 4 ವರ್ಷದ ನಂತರ ಜನಸಂಘವಾಗಿದೆ. 1980ರಲ್ಲಿ ಬಿಜೆಪಿ ಪಕ್ಷವಾಗಿದೆ. ಇವಾಗ ಹರ್ ಘರ್ ತಿರಂಗಾ ಅಂತಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಆರ್‌ಎಸ್‍ಎಸ್‍ನ ಮುಖವಾಡ ಎಂದು ಟೀಕಿಸಿದರು.

ಜೆಡಿಎಸ್, ಕುಮಾರಸ್ವಾಮಿ ವಿರುದ್ಧವೂ ಲೇವಡಿ ಮಾಡಿದ ಅವರು, ಜೆಡಿಎಸ್ ಯಾವತ್ತೂ ಹೋರಾಟ ಮಾಡಿಲ್ಲ. ಬೇರೆಯವರ ಬೆಂಕಿಯಲ್ಲಿ ಕೈಕಾಯಿಸಿಕೊಳ್ಳುವುದು ಜೆಡಿಎಸ್ ಆಗಿದೆ. ಅವರಿಗೆ ಅವಮಾನ ಮಾಡಲು ಮಾತನಾಡುತ್ತಿಲ್ಲ. ಅವರು ಯಾವಾಗಲೂ ಮಧ್ಯದಲ್ಲಿ ನುಗ್ಗಿ ಬಿಡೋಣ ಅಂದುಕೊಂಡಿರುತ್ತಾರೆ. ನಾವು ಸಿಎಂ ಮಾಡಿದ್ದನ್ನು ಅವರು ಉಳಿಸಿಕೊಂಡರಾ ಮಿಸ್ಟರ್ ಕುಮಾರಸ್ವಾಮಿ ಎಂದು ವ್ಯಂಗ್ಯ ಮಾಡಿದರು. ಇದೇ ಮಾತಿಗೆ ಕುಮಾರಸ್ವಾಮಿ ಇದೀಗ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com