ಸಿದ್ದರಾಮಯ್ಯ ಮೇಲೆ 'ಬಿಜೆಪಿ' ಮೊಟ್ಟೆ ದಾಳಿ; ಕಾಂಗ್ರೆಸ್ ಗೆ ಸಿಕ್ತು 'ಹೈ ಪ್ರೊಟೀನ್': ರಾಜ್ಯಾದ್ಯಂತ ಪ್ರತಿಭಟಿಸಲು ಮೈ ಕೊಡವಿ ಎದ್ದು ನಿಂತ 'ಕೈ'ನಾಯಕರು!

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ದಾಳಿಮಾಡಿ, ಮೊಟ್ಟೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಸ್ಯ ಮರೆತು ಮೈ ಕೊಡವಿ ಎದ್ದು ನಿಂತಿರುವ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ದಾಳಿಮಾಡಿ, ಮೊಟ್ಟೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಸ್ಯ ಮರೆತು ಮೈ ಕೊಡವಿ ಎದ್ದು ನಿಂತಿರುವ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಗುರುವಾರ ಕೊಡಗಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆಯ ಸಂಕೇತವಾಗಿ ಮೊಟ್ಟೆ ಹಿಡಿದುಕೊಂಡಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮೊಟ್ಟೆ ತಿಂದು ಪ್ರತಿಭಟನೆ ನಡೆಸಿದರು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ಸೇರಿದ ಮುಖಂಡರು ಬಿಜೆಪಿ ಮುಖಂಡ ಅಮಿತ್ ಶಾ ಭಾವಚಿತ್ರಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಎಲ್ಲರೂ ಮೊಟ್ಟೆ ಸೇವನೆ ಮಾಡಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಾವು ಕಾಂಗ್ರೆಸ್ ನವರು ಮಹಾತ್ಮ ಗಾಂಧಿ ಆದರ್ಶಗಳನ್ನು ಪಾಲಿಸುತ್ತೇವೆ, ಹೀಗಾಗಿ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವಂತೆ ಬಿಜೆಪಿ ಸಚಿವರಿಗೆ ಮೊಟ್ಟೆಗಳನ್ನು ಕಳುಹಿಸುತ್ತೇವೆ ಎಂದು ಯೂತ್ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಬಿಜೆಪಿ ಸಸ್ಯಾಹಾರಿಗಳ ಪಕ್ಷವಲ್ಲವೇ? ಮಾಂಸಾಹಾರಿ ಎಂದು ಪರಿಗಣಿಸಲಾದ ಮೊಟ್ಟೆಗಳನ್ನು ಏಕೆ ಎಸೆಯುತ್ತಿದ್ದಾರೆ? ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರೂ, ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ-ಕೊಡಗು ಶಾಸಕ ಕೆ.ಜಿ.ಬೋಪಯ್ಯ ಬಿಜೆಪಿಯನ್ನು ಈ ವಿಚಾರದಿಂದ ದೂರವಿಡಲು ಯತ್ನಿಸುತ್ತಿದ್ದಾರೆ , ಮೊಟ್ಟೆ ಎಸೆದವರು ಬಿದೆಪಿ ಕಾರ್ಯಕರ್ತರಲ್ಲ ಎಂದು ಸಮರ್ಥನೆ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಆರೋಪಿಸಿದ್ದಾರೆ.

ಕೊಡಗಿನಲ್ಲಿ ಬಂಧಿಸಿದ್ದ ಪ್ರತಿಭಟನಾಕಾರರ ಬಿಡುಗಡೆಯಲ್ಲಿ ಶಾಸಕ ಅಪ್ಪಚ್ಚು ರಂಜನ್‌ ಕೈವಾಡವಿದೆ ಎಂಬ ಮಾಹಿತಿ ಹೊರಬಿದ್ದ ನಂತರ ಆಕ್ರೋಶಗೊಂಡ ಕಾಂಗ್ರೆಸ್‌ ಶಾಸಕ ಬೈರತಿ ಸುರೇಶ್‌, ಅಪ್ಪಚ್ಚು ರಂಜನ್‌ ಮೇಲೆ ಕೊಳೆತ ಮೊಟ್ಟೆ ಎಸೆಯುತ್ತೇವೆ ಎಂದು ಹೇಳಿದ್ದಾರೆ.

ಮೊಟ್ಟೆಯ ದಾಳಿ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಆಗಿರಬಹುದು ಎಂದು  ರಾಜಕೀಯ ತಜ್ಞರು  ಅಭಿಪ್ರಾಯ ಪಟ್ಟಿದ್ದಾರೆ. ಕುರುಬ ಮತ್ತು ಅಹಿಂದ ಮತದಾರ ಬೆಂಬಲ ಕಡಿಮೆಯಾಗಿತ್ತು. ಹತ್ತಕ್ಕೆ ಹತ್ತರಷ್ಟಿದ್ದ ಬೆಂಬಲ ಹತ್ತಕ್ಕೆ ಐದರಂತೆ ಕಡಿಮೆಯಾಗಿತ್ತು, ಆದರೆ ಈ ಮೊಟ್ಟೆ ಪ್ರಕರಣದ ನಂತರ ಸಿದ್ದರಾಮಯ್ಯ ಅವರಿಗೆ ಇದ್ದಕ್ಕಿದ್ದಂತೆ ಬೆಂಬಲದ ಏರಿಕೆ ಕಂಡುಬಂದಿದೆ  ಎಂದು ಹೇಳಿದ್ದಾರೆ.  ಕುರುಬ ಮತ್ತು ಅಹಿಂದ ಮತದಾರರು ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ತಮ್ಮ ಪಕ್ಷದ ಮುಖಂಡರ ವಾಹನದ ಮೇಲೆ ಮೊಟ್ಟೆ ಎಸೆದು ಅಲ್ಲಿಯೆ ಸಮಾವೇಶ ನಡೆಸುವುದಾಗಿ ಹಲವು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ., ಇದು ಮೊಟ್ಟೆಗಳನ್ನು ಸಂಗ್ರಹಿಸುವ ಅಧ್ಯಯನವಾಗಿದೆ. ಸಿದ್ದರಾಮಯ್ಯನವರ ವಿಚಾರದಲ್ಲಿ ಅವರು ವಿಧಾನಸಭೆ ಚುನಾವಣೆಗೆ ಹಲವು ತಿಂಗಳಿರುವಾಗಲೇ ಸರಿಯಾದ ಮೊಟ್ಟೆಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಕುತಂತ್ರಿಗಳೇ ಇರಬೇಕು' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಬಿಜೆಪಿಯವರಲ್ಲ. ಕಾಂಗ್ರೆಸ್ಸಿಗರೇ ಮಾಡಿದ್ದಾರೆ. ಕಾಂಗ್ರೆಸ್ ಕುತಂತ್ರಿಗಳೇ ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡು ಪ್ರತಿಭಟನೆಯ ವೇಳೆ ಈ ಕೃತ್ಯವೆಸಗಿದ್ದಾರೆ' ಎಂದು ದೂರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com