ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದರೆ ನಿಮ್ಮ ಕಾನೂನು ವ್ಯವಸ್ಥೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?: ಡಿಕೆ ಶಿವಕುಮಾರ್ ಗುಡುಗು

ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಸಿಎಂ ಮತ್ತು ಸಚಿವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಸನ್ನಿವೇಶವೇ ಬೇರೆಯೇ ಆಗಲಿದೆ .
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಚಿಕ್ಕಮಗಳೂರು: ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಸಿಎಂ ಮತ್ತು ಸಚಿವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಸನ್ನಿವೇಶವೇ ಬೇರೆಯೇ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ತಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ಇಲ್ಲದಿದ್ದರೆ ಸಿಎಂ ಸೇರಿದಂತೆ ಎಲ್ಲ ಮಂತ್ರಿಗಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇವಲ ನಮ್ಮ ಪಕ್ಷದ ನಾಯಕರಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಹಕ್ಕಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಅವರ ಯಾವುದಾದರೂ ಹೇಳಿಕೆ ಸರಿ ಇಲ್ಲ ಎನಿಸಿದ್ದಲ್ಲಿ ಅದನ್ನು ಟೀಕೆ ಮಾಡಬಹುದು. ಅದು ಪ್ರಜಾಪ್ರಭುತ್ವದ ಭಾಗ. ಆದರೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಕಣ್ಣು ತೆರೆಸಲು ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವಾಗ ಈ ರೀತಿ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಹೊಡೆದಿರುವುದು ಸರಿಯಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.

ಸರ್ಕಾರ ಮಾಡಿದ ಅನೇಕ ತಪ್ಪುಗಳನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತಮಗೆ ಅನ್ಯಾಯ ಆಗಿದೆ ಎಂದು ಪ್ರತಿಭಟಿಸಿದ್ದಾರೆ. ಇದು ಚರ್ಚೆಗೆ ನಮಗೆ ಕೊಟ್ಟಿರುವ ಅಸ್ತ್ರಗಳು. ರಾಜ್ಯದ ಜನ ಸಮಸ್ಯೆಗಳಿಂದ ಪರದಾಡುತ್ತಿರುವಾಗ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ವಿರೋಧ ಪಕ್ಷದ್ದಾಗಿದೆ. ಅದನ್ನು ಮಾಡಲು ಮುಂದಾದರೆ ಕಪ್ಪು ಬಾವುಟ ಹಾರಿಸಿ, ಮೊಟ್ಟೆ ಹೊಡೆಯುತ್ತಿದ್ದಾರೆ. ಈ ರೀತಿ ಸಿದ್ದರಾಮಯ್ಯರನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವೇ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ವಿರೋಧ ಪಕ್ಷದ ನಾಯಕರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಬೊಮ್ಮಾಯಿ ಸಾಹೇಬರೆ, ಕಟೀಲ್ ಸಾಹೇಬರೇ ನಾನು ಯಾವುದೇ ಕರೆ ನೀಡದಿದ್ದರೂ ಅನೇಕ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಅಧಿಕೃತವಾಗಿ ಕರೆ ನೀಡಿ ಮಂತ್ರಿಗಳ ಕಾರ್ಯಕ್ರಮದ ಕಡೆಗಳಲ್ಲಿ ಅದೇ ಕಪ್ಪು ಬಾವುಟ ಹಿಡಿದು ಅಡ್ಡಿ ಮಾಡಲು ಹೊರಟರೆ ನಿಮ್ಮ ಕಾನೂನು ವ್ಯವಸ್ಥೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com