'ನಾನು ಅವತ್ತು ಮಾಂಸಹಾರ ಸೇವಿಸಿರಲಿಲ್ಲ, ಸಂಪತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ': ಸಿದ್ದರಾಮಯ್ಯ ಸ್ಪಷ್ಟನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಂಸಹಾರ ಸೇವನೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಸಾಕಷ್ಟು ಚರ್ಚೆ-ವಾಗ್ಯುದ್ಧಗಳಿಗೆ ಕಾರಣವಾಗಿತ್ತು. ಅದು 2017ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಧರ್ಮಸ್ಥಳಕ್ಕೆ ಸಿದ್ದರಾಮಯ್ಯನವರು ಮೀನು ತಿಂದು ಹೋಗಿದ್ದರು ಎಂಬಲ್ಲಿಂದ ಹಿಡಿದು ಮೊನ್ನೆ ಕೊಡಗಿಗೆ ಭೇಟಿ ನೀಡಿದ್ದಾಗ ಮಾಂಸ ಸೇವಿಸಿ ಬಸವ ಮೂರ್ತಿ ದೇವಸ್ಥಾನಕ್ಕೆ ಹೋಗಿದ್ದರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಂಸಹಾರ ಸೇವನೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಸಾಕಷ್ಟು ಚರ್ಚೆ-ವಾಗ್ಯುದ್ಧಗಳಿಗೆ ಕಾರಣವಾಗಿತ್ತು. ಅದು 2017ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಧರ್ಮಸ್ಥಳಕ್ಕೆ ಸಿದ್ದರಾಮಯ್ಯನವರು ಮೀನು ತಿಂದು ಹೋಗಿದ್ದರು ಎಂಬಲ್ಲಿಂದ ಹಿಡಿದು ಮೊನ್ನೆ ಕೊಡಗಿಗೆ ಭೇಟಿ ನೀಡಿದ್ದಾಗ ಮಾಂಸ ಸೇವಿಸಿ ಬಸವ ಮೂರ್ತಿ ದೇವಸ್ಥಾನಕ್ಕೆ ಹೋಗಿದ್ದರು ಎಂದು ಅಲ್ಲಿಂದ 2017ರಲ್ಲಿ ಮೈಸೂರು ದಸರಾಕ್ಕೆ ಮೊದಲು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೊದಲು ಮಾಂಸ ಸೇವಿಸಿ ಪೂಜೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸುವಲ್ಲಿಯವರೆಗೆ ಸದ್ಯ ಬಂದು ನಿಂತಿತ್ತು.

ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ವತಃ ಸಿದ್ದರಾಮಯ್ಯನವರೇ ಮಾಂಸಹಾರ ಸೇವನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊನ್ನೆ ಕೊಡಗಿನಲ್ಲಿ ನಾನು ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮುನ್ನ ಮಾಂಸ ಸೇವಿಸಿಯೇ ಇಲ್ಲ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರಲಿಲ್ಲ. ಮಾಧ್ಯಮದವರು ಮಾಂಸಹಾರ ಸೇವನೆ ಬಗ್ಗೆ ಕೇಳಿದಾಗ ಆ ರೀತಿ ಪ್ರತಿಕ್ರಿಯೆ ನೀಡಿದೆಯಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಇಂದು ಹೇಳಿದ್ದೇನು?: ನಾನು ಮಾಂಸಹಾರಿ, ಬರಿ ಕೋಳಿ ಮಾಂಸ, ಮೇಕೆ ಮಾಂಸ, ಮರಿ ಮಾಂಸ ತಿನ್ನುತ್ತೇನೆ. ಇನ್ನು ಯಾವ ಮಾಂಸವನ್ನೂ ತಿಂದಿಲ್ಲ, ತಿನ್ನುವುದೂ ಇಲ್ಲ, ಹಂದಿ ಮಾಂಸ ತಿನ್ನಿ ಎನ್ನುವವರನ್ನು ತಿನ್ನಲು ಹೇಳಿ, ನಾನು ತಿನ್ನೋದಿಲ್ಲ, ಹಾಗೆಂದು ತಿನ್ನುವವರ ವಿರುದ್ಧ ಇಲ್ಲ, ನಾನು ನನ್ನ ಅಭ್ಯಾಸವನ್ನು ಹೇಳುತ್ತೇನೆ, ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ನಾನು ಅಡ್ಡಿಪಡಿಸಲು ಹೋಗುವುದಿಲ್ಲ ಎಂದರು.

ಅವತ್ತು ಬಹಳ ಜನ ಬಂದಿದ್ದರು, ಅವರಲ್ಲಿ ಯಾರು ಮಾಂಸ ಸೇವಿಸಿ ಬಂದಿದ್ದರು ಎಂದು ಯಾರಿಗೆ ಗೊತ್ತು, ಅದು ಕೊಡ್ಲಿಪೇಟೆಯ ಬಸವಮೂರ್ತಿ ಇರುವ ದೇವಸ್ಥಾನ. ನಿಜ ಹೇಳಬೇಕೆಂದರೆ ನಾನು ಅವತ್ತು ಮಾಂಸ ಸೇವಿಸಿಯೇ ಇಲ್ಲ, ವಾದಕ್ಕೆ ಬೇಕಾಗಿ ಮಾಧ್ಯಮಗಳ ಮುಂದೆ ಮಾಂಸಹಾರ ಸೇವನೆಯನ್ನು ಸಮರ್ಥಿಸಿಕೊಂಡೆ ಅಷ್ಟೆ. ವೀಣಾ ಅಚ್ಚಯ್ಯ ಅವರು ನಾಟಿಕೋಳಿ ಸಾರು ಮಾಡಿಕೊಂಡು ಬಂದಿದ್ದರು. ಆದರೆ ನಾನು ಅಕ್ಕಿರೊಟ್ಟಿ, ಕಣಲೆ ಪಲ್ಯ ಮಾತ್ರ ತಿಂದೆ ಅಷ್ಟೆ ಎಂದರು. 

ಸಂಪತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ: ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ ಅಲ್ಲ. ಆತ RSS ಕಾರ್ಯಕರ್ತ, ಕೇಸರಿ ಶಾಲು ಹೊದ್ದುಕೊಂಡಿದ್ದಾನೆ. ಬಿಜೆಪಿಯವ್ರೇ ಆತನನ್ನು ಬಿಡಿಸಿದ್ದಾರೆ ಎಂದರು.

ಅಪ್ಪಚ್ಚು ರಂಜನ್​​ ಅವರೇ ಸಂಪತ್​ನನ್ನು ಬಿಡಿಸಿದ್ದಾರೆ. ಕೊನೆಗೆ ಆತನ ಬಾಯಿಂದಲೇ ಸುಳ್ಳು ಹೇಳಿಸಿದ್ದಾರೆ. ಸಂಪತ್​ ಕಾಂಗ್ರೆಸ್​ ಕಾರ್ಯಕರ್ತ ಅಲ್ಲವೇ ಅಲ್ಲ. ಇದೆಲ್ಲಾ ನೋಡಿದರೆ ಇದು ಬಿಜೆಪಿ ಸರ್ಕಾರದ ಪ್ರಾಯೋಜಿತ ಪ್ರತಿಭಟನೆ ಎಂದು ಗೊತ್ತಾಗುತ್ತದೆ. ನಾನು ಕಳಪೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದೆ, ಕಳಪೆ ಕಾಮಗಾರಿ ವೀಕ್ಷಣೆ ತಡೆಯಲು ಪ್ರತಿಭಟನೆ ನಡೆಸಿದರು ಎಂದು ಬಿಜೆಪಿ ನಾಯಕರ ಮೇಲೆ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಾನು ಚುನಾವಣೆ ದೃಷ್ಟಿಯಿಂದ ಕೊಡಗಿಗೆ ಹೋಗಿರಲಿಲ್ಲ, ಸಾವರ್ಕರ್ ಬಗ್ಗೆ ಮಾತನಾಡಲೂ ಹೋಗಿರಲಿಲ್ಲ. ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಹೋಗಿದ್ದೆ. ಅಲ್ಲಿ ಮಾಂಸಹಾರ ಸೇವನೆ ಬಗ್ಗೆ ಇಷ್ಟೊಂದು ವಿವಾದ ಮಾಡುವ ಅಗತ್ಯವಿರಲಿಲ್ಲ. ಹಲವು ದೇವಸ್ಥಾನಗಳಲ್ಲಿ ಮಾಂಸವನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ ಎಂದು ಕೂಡ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com