ಸರ್ಕಾರದ ಆದೇಶ ಪಾಲಿಸುತ್ತೇವೆ, 'ಮಡಿಕೇರಿ ಚಲೋ' ಮುಂದೂಡುತ್ತೇವೆ: ಮಾಜಿ ಸಿಎಂ ಸಿದ್ದರಾಮಯ್ಯ

ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನಾ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನಾ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದ್ದಾರೆ. ನಾಳೆಯಿಂದ ನಾಲ್ಕು ದಿನ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಾವು ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?: ಜಿಲ್ಲಾಧಿಕಾರಿ ಆದೇಶ ಎಂದರೆ ಅದು ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶವನ್ನು ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ, ಇದು ನನ್ನೊಬ್ಬನ ನಿರ್ಧಾರವಲ್ಲ, ಎಲ್ಲಾ ಕಾಂಗ್ರೆಸ್ ನಾಯಕರ ತೀರ್ಮಾನ ಎಂದರು. 

ಮುಂದೆ ಎಲ್ಲ ಕಾಂಗ್ರೆಸ್ ನಾಯಕರು, ಸ್ನೇಹಿತರೊಂದಿಗೆ ಚರ್ಚಿಸಿ ಮಡಿಕೇರಿ ಚಲೋ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಇದು ಆಡಳಿತ ಪಕ್ಷ ಬಿಜೆಪಿಯ ಷಡ್ಯಂತ್ರವಾಗಿದೆ. ಆಡಳಿತ ಪಕ್ಷದ ಷಡ್ಯಂತ್ರದೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ. ಕೊಡಗು ಜಿಲ್ಲೆಯ ಭೇಟಿ ವೇಳೆ ತಮ್ಮ ವಿರುದ್ಧ ನಡೆದ ಪ್ರತಿಭಟನೆಯ ಪ್ರತಿ ಹಂತದಲ್ಲಿಯೂ ಪೊಲೀಸರ ನಿಷ್ಕ್ರಿಯತೆ ಎದ್ದು ಕಾಣುತ್ತಿತ್ತು ಎಂದು ಆರೋಪಿಸಿದ್ದಾರೆ. 

ಕೊಡಗಿಗೆ ಬರಲಿ ನಾವು ನೋಡ್ಕೋತೀವಿ ಅಂತಾ ಶಾಸಕ ಬೋಪಯ್ಯ ಹೇಳುತ್ತಾರೆ. ನಾವೇನು ಸ್ವಾತಂತ್ರ್ಯ ಭಾರತದಲ್ಲಿ ಇದ್ದೇವಾ ನನಗೆ ಸವಾಲು ಹಾಕ್ತಾರೆ ಇವರು. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿ ಅವರ ಆಟಾಟೋಪದ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಬಿಜೆಪಿ ಜನಜಾಗೃತಿ ಸಮಾವೇಶ ಮಾಡಲು ಹೊರಟಿದ್ದು ದ್ವೇಷದಿಂದ. ನಾನು ಮಡಿಕೇರಿ ಚಲೋ ಘೋಷಣೆ ಮಾಡಿದ ಬಳಿಕ ಅದರ ಮಾರನೇ ದಿನ ಬಿಜೆಪಿ ಅವರು ಘೋಷಣೆ ಮಾಡಿದ್ರು. ನಮ್ಮ ಮೇಲೆ ಕುಟಿಲ ಪ್ರಯತ್ನ ಮಾಡಿ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು.

ಮೊನ್ನೆ ಆಗಸ್ಟ್ 18ರಂದು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಯನ್ನು ವೀಕ್ಷಿಸಲು ತೆರಳಿದ್ದೆ. ಹಲವೆಡೆ ಮಳೆ ಹೆಚ್ಚಾಗಿ ಬಿದ್ದು ಹಾನಿಯಾಗಿದೆ. ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಎರಡು-ಮೂರು ಪಟ್ಟು ಹೆಚ್ಚು ಮಳೆ ಬಿದ್ದಿದೆ. ಇಡೀ ಕೊಡಗು ಜಿಲ್ಲೆಯಲ್ಲಿ ಮಣ್ಣು ಕುಸಿದಿದೆ. ಜನರು ವಾಸ ಮಾಡುತ್ತಿದ್ದ ಮನೆಗಳಿಗೆ ಹಾನಿಯಾಗಿದೆ. ಇನ್ನು ಕೆಲವು ಕಡೆ ರಸ್ತೆಯ ಮೇಲೆ ಮಣ್ಣು ಬಿದ್ದು ಮುಚ್ಚಿ ಹೋಗಿ ಸಾರಿಗೆಗೆ ಬಹಳ ತೊಂದರೆ ಆಗಿದೆ, ಈ ಮಧ್ಯೆ ಕೊಡಗಿನ ಜನರು ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪ ಆತಂಕ ಎದುರಿಸುತ್ತಿದ್ದಾರೆ ಎಂದರು.

ಅಂದು ತಾವು ಭೇಟಿ ನೀಡಿದ್ದ ವೇಳೆ ಕೊಡಗಿನ ತಿತಿಮತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಆಗ ಪೊಲೀಸರು ಸುಮ್ಮನಿದ್ದರು. ಯಾರೋ ಒಬ್ಬ ಬಂದು ಏನೋ ಕಾರಿನ ಒಳಗಡೆ ಬ್ಯಾನರ್ ಎಸೆದ. ಅವನನ್ನೂ ಪೊಲೀಸರು ಹಿಡಿಯಲಿಲ್ಲ. ಕೊನಾನು ಅಲ್ಲಿಗೆ ಭೇಟಿ ಕೊಟ್ಟಾಗ ಪ್ರತಿಭಟನೆ ವೇಳೆ ಮೊಟ್ಟೆ ಎಸೆದರು. ಆಗಲೂ ಪೊಲೀಸರು ಏನೂ ಮಾಡಲಿಲ್ಲ. ಗಲಾಟೆ ಹಿಂದೆ  ಆರ್​ಎಸ್ಎಸ್ ಭಜರಂಗದದವರ ಕೈವಾಡವಿದ್ದು ಅವರ ಮೇಲೆ ಏನೂ ಕ್ರಮ ಕೈಗೊಂಡಿಲ್ಲ. ನಮ್ಮ ಕಾರ್ಯಕರ್ತರು ಮೇಲೆ ಮಾತ್ರ ಲಾಠಿ ಚಾರ್ಜ್ ನಡೆಸಲಾಯಿತು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com