
ಬೆಂಗಳೂರು: ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಸಾವರ್ಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಹಾಕಿದರು.
ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು?
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವ ಮುನಿರತ್ನ ಅವರ ಮೇಲೆ ಮಾಡಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಈ ವಿಚಾರದಲ್ಲಿ ನಾವು ಆರೋಪ ಮಾಡಿದಾಗ ಸಾಕ್ಷಿ ಕೊಡಿ ಎಂದು ಕೇಳುತ್ತಾರೆ. ಈಗ ರಾಜ್ಯ ಸರ್ಕಾರದ ನೋಂದಣಿಯಾಗಿರುವ, ರಾಜ್ಯ ಸರ್ಕಾರದ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸಚಿವರುಗಳ ಮೇಲೆ ನೇರ ಆರೋಪ ಮಾಡುತ್ತಿರುವಾಗ ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು? ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿ ಚರ್ಚೆ ಮಾಡಲಿ. ನಾವು ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಕೆಂಪಣ್ಣ ಅವರೇ ಹೇಳಿದ್ದು, ಇದು ಯಾಕೆ ಆಗಿಲ್ಲ. ಈ ಸರ್ಕಾರ ನಿಜಕ್ಕೂ ತಪ್ಪು ಮಾಡಿಲ್ಲವಾದರೆ ಅವರಿಂದ ದಾಖಲೆ ಪಡೆದು, ಅದರ ತನಿಖೆಗೆ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಿಲ್ಲ ಯಾಕೆ? ಇವರು ತಮಗೆ ತಾವೇ ನಿರಪರಾಧಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿರುವುದೇಕೆ? ಬಿಜೆಪಿಗೆ ವಲಸಿಗ ಮಂತ್ರಿಗಳು ಅನಿವಾರ್ಯವಾಗಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಪರಿಪರಿಯಾಗಿ ಬೇಡಿಕೊಂಡರು ಯಾರೂ ಹೋಗಲಿಲ್ಲ. ಕೊನೆಗೆ ಮುಖ್ಯಮಂತ್ರಿಗಳು ಜಿಲ್ಲಾ ಪರಿಶಿಲನಾ ಸಭೆ ಮಾಡಿ ಮಂತ್ರಿಗಳಿಗೆ ವರದಿ ನೀಡಬೇಕಾಯಿತು. ಆಪರೇಷನ್ ಕಮಲ ಮಾಡಿದ ಬಿಜೆಪಿ ಈಗ ಅನುಭವಿಸುತ್ತಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕಲ್ಲವೇ?’ ಎಂದರು.
Advertisement