ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೇ, ನಮ್ಮ ಪಕ್ಷದವರಿಂದಲೇ ನನ್ನ ವಿರುದ್ಧ ಸಂಚು: ಸಿಪಿ ಯೋಗೇಶ್ವರ್

ಮುಂದಿನ ರಾಜಕೀಯ ಭವಿಷ್ಯವನ್ನು ಬಿಜೆಪಿಯಲ್ಲಿಯೇ ಕಳೆಯುತ್ತೇನೆ. ಪಕ್ಷಾಂತರ ಮಾಡಲಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಸ್ಪಷ್ಟನೆ ನೀಡಿದರು.
ಸಿ.ಪಿ ಯೋಗೇಶ್ವರ್
ಸಿ.ಪಿ ಯೋಗೇಶ್ವರ್

ರಾಮನಗರ: ಮುಂದಿನ ರಾಜಕೀಯ ಭವಿಷ್ಯವನ್ನು ಬಿಜೆಪಿಯಲ್ಲಿಯೇ ಕಳೆಯುತ್ತೇನೆ. ಪಕ್ಷಾಂತರ ಮಾಡಲಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಸ್ಪಷ್ಟನೆ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಪ್ರತಿ 6 ತಿಂಗಳಿಗೊಮ್ಮೆ ನಾನು ಪಕ್ಷ ಬಿಡುತ್ತೇನೆ ಎಂಬ ವದಂತಿಗಳು ಹರದಿದಾಡುತ್ತಲೇ ಇರುತ್ತದೆ. ನನ್ನನ್ನು ಸೆಳೆದುಕೊಂಡರೆ, ಅವರ ಪಕ್ಷ ಭದ್ರಗೊಳ್ಳಲಿದೆ ಎಂಬ ಕಾರಣಕ್ಕೆ ಇತರೆ ಪಕ್ಷಗಳೇ ಈ ರೀತಿ ಅಪಪ್ರಚಾರ ಮಾಡುತ್ತಿರಬಹುದು’ ಎಂದು ಆರೋಪಿಸಿದರು.

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರೆ ಅನ್ನುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಕೆಲವರು ಸುಖಾ ಸುಮ್ಮನೆ ಗೊಂದಲ ಸೃಷ್ಟಿಸಿ, ಬಿಜೆಪಿ ಪಕ್ಷದಲ್ಲಿ ನನ್ನ ಬಗ್ಗೆ ಅಪನಂಬಿಕೆ ಸೃಷ್ಠಿಸಲು ಹುನ್ನಾರ ನಡೆಸಿದ್ದಾರೆ ಅಷ್ಟೇ. ನನ್ನ ಮುಂದಿನ ರಾಜಕೀಯ ಜೀವನ ಬಿಜೆಪಿಯಲ್ಲಿ ಮಾತ್ರ," ಎಂದು ಸಿ.ಪಿ.ಯೋಗೇಶ್ವರ್ ತಮ್ಮ ನಿರ್ಧಾರವನ್ನು ಹೇಳಿದರು.

2009ರಲ್ಲಿ ನಾನು ಬಿಜೆಪಿ ಸೇರಿದ್ದೆ. ಅಲ್ಲಿಂದ ಪಕ್ಷದ ವಿಚಾರ, ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದೇನೆ. ಈ ಹಿಂದೆ ಬಿಜೆಪಿ ಮೂರು ಭಾಗವಾಗಿದ್ದ ವೇಳೆ ಸ್ವತಂತ್ರ್ಯವಾಗಿ ನಿಂತು ಬಳಿಕ ಸಮಾಜವಾದಿ ಪಕ್ಷ ಸೇರಿದ್ದೆ. ನನಗೆ ಯಾವುದೇ ಸಂದರ್ಭದಲ್ಲಿಯೂ ಕಾಂಗ್ರೆಸ್ ಮಾತೃ ಪಕ್ಷ ಆಗಿರಲಿಲ್ಲ ಎಂದು ವಿವರಿಸಿದರು.

ಬಿಜೆಪಿ ನನಗೆ ನಾಲ್ಕು ಬಾರಿ ಸ್ವರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿ ಪಕ್ಷ ಹಳೇ ಮೈಸೂರು ಭಾಗದಲ್ಲಿ ಗಟ್ಟಿಯಾಗಿ ನೆಲೆ ಊರುತ್ತಿದೆ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ರೀತಿ ಗೊಂದಲ ಸೃಷ್ಟಿಸಿ ನಮ್ಮ ಪಕ್ಷದಲ್ಲೆ ನನ್ನ ವಿರುದ್ಧ ಸಂಚು ನಡೆಸುತ್ತಿದ್ದಾರೆ ಎಂದು ಸ್ವಪಕ್ಷ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗಂಭೀರ ಆರೋಪ ಮಾಡಿದರು.

ಸಿದ್ದರಾಮೋತ್ಸವ ಜಯಂತಿಯಂದು ಯಾರಿಗೂ ಯಾವುದೇ ಬಸ್ ವ್ಯವಸ್ಥೆಯನ್ನು ತಾನು ಮಾಡಿಲ್ಲ. ಪಕ್ಷ ವಿರೋಧಿ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಹೇಳಿದ ಅವರು, ಎಂಎಲ್ ಸಿ ಚುನಾವಣೆ ವೇಳೆ ನಮ್ಮ ಪಕ್ಷದಿಂದ ಪ್ರಬಲ ಅಭ್ಯರ್ಥಿ ಇರಲಿಲ್ಲ. ನಾನು ಮತದಾರರ ವೈಯಕ್ತಿಕ ಅಭಿಪ್ರಾಯಕ್ಕೆ ಚುನಾವಣೆ ಬಿಟ್ಟಿದ್ದೆ. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com