ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿ, ಅಮಿತ್ ಶಾ ರ‍್ಯಾಲಿ ಆಯೋಜಿಸಲು ಬಿಜೆಪಿ ಸಿದ್ಧತೆ!

ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ರಾಜ್ಯ ಬಿಜೆಪಿಯು ರಾಜ್ಯಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸರಣಿ ಸಾರ್ವಜನಿಕ ರ್ಯಾಲಿಗಳ ನಡೆಸಲು ಸಿದ್ಧತೆ ನಡೆಸಿದೆ.
ಪ್ರಧಾನಿ ಮೋದಿ, ಅಮಿತ್ ಶಾ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ, ಅಮಿತ್ ಶಾ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ರಾಜ್ಯ ಬಿಜೆಪಿಯು ರಾಜ್ಯಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸರಣಿ ಸಾರ್ವಜನಿಕ ರ್ಯಾಲಿಗಳ ನಡೆಸಲು ಸಿದ್ಧತೆ ನಡೆಸಿದೆ.

ಜನವರಿಯಲ್ಲಿ, ಬೆಳಗಾವಿಯಲ್ಲಿ ನಡೆಯಲಿರುವ ರೈತ ಮೋರ್ಚಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಅಮಿತ್ ಶಾ ಅವರು ಚಿತ್ರದುರ್ಗದಲ್ಲಿ ಎಸ್‌ಸಿ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಕೂಡ ಜನವರಿ 8 ರಂದು ಎಸ್‌ಸಿ/ಎಸ್‌ಟಿ ಸಮಾವೇಶವನ್ನು ಆಯೋಜಿಸಿದೆ ಎಂದು ತಿಳಿದುಬಂದಿದೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, "ಮೋದಿ 15 ದಿನಕ್ಕೊಮ್ಮೆ ಮತ್ತು ಶಾ ತಿಂಗಳಿಗೆ ನಾಲ್ಕು ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ" ಎಂದು ಹೇಳಿದರು.

ಡಿಸೆಂಬರ್ 18 ರಂದು ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಲಿದ್ದಾರೆ. ಡಿ.15, 20 ಮತ್ತು 21 ರಂದು ಬಾಗಲಕೋಟೆಯಲ್ಲಿ ನಡ್ಡಾ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಜನವರಿ 12 ರಂದು ಉಡುಪಿಯಲ್ಲಿ ಪಕ್ಷದ ಯುವ ಮೋರ್ಚಾ ಸಮಾವೇಶದಲ್ಲಿ ಆದಿತ್ಯನಾಥ್ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

ಈ ಬಾರಿ ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿರುವುದರಿಂದ  ಆರ್‌ಎಸ್‌ಎಸ್ ಮುಖಂಡರು ಚುನಾವಣಾ ಪ್ರಚಾರ ಕುರಿತು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದಾರೆ.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಶುಕ್ರವಾರ ರಾತ್ರಿ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮುಕುಂದ ಸಿಆರ್ ಅವರು ಸಿಎಂ ಅವರೊಂದಿಗೆ ಎರಡು ಗಂಟೆಗಳ ಕಾಲ ಸಭೆ ನಡೆಸಿದರು.

ಸಭೆಯಲ್ಲಿ ಸಂಪುಟ ವಿಸ್ತರಣೆ ಹಾಗೂ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಪಿ.ಯೋಗಿಶ್ವರ ಮತ್ತು ರಮೇಶ್ ಜಾರಕಿಹೊಳಿ ಅವರ ಸೇರ್ಪಡೆ ಕುರಿತು, ಕೆಲವು ಸ್ಥಾನಗಳಲ್ಲಿ ಪಕ್ಷದ ಬಲ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಚುನಾವಣೆ ಕುರಿತು ತಂತ್ರ ರೂಪಿಸುತ್ತಿರುವವರಲ್ಲಿ ಕೇಂದ್ರ ಸಚಿವ ಭೂಪೇಂದರ್ ಯಾದವ್ ಹಾಗೂ ಪಿಯೂಷ್ ಗೋಯಲ್ ಅವರು ಪ್ರಮುಖರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಬೊಮ್ಮಾಯಿಯವರು ದೆಹಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಇಬ್ಬರೂ ನಾಯಕರನ್ನ ಭೇಟಿ ಮಾಡಿದ್ದು, ಕೆಲ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com