ಬಿ ಎಸ್ ಯಡಿಯೂರಪ್ಪ ಬೇಸರ ಶಮನ: ಕೊಪ್ಪಳಕ್ಕೆ ಹೊರಟ ನಾಯಕ
ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ಕೊಪ್ಪಳದಲ್ಲಿ ಇಂದು ಗುರುವಾರ ಬಿಜೆಪಿ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೊನೆಗೂ ಭಾಗವಹಿಸಲು ಕೊನೆ ಕ್ಷಣದಲ್ಲಿ ನಿರ್ಧರಿಸಿದ್ದಾರೆ.
Published: 15th December 2022 08:39 AM | Last Updated: 15th December 2022 10:59 AM | A+A A-

ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ಕೊಪ್ಪಳದಲ್ಲಿ ಇಂದು ಗುರುವಾರ ಬಿಜೆಪಿ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೊನೆಗೂ ಭಾಗವಹಿಸಲು ಕೊನೆ ಕ್ಷಣದಲ್ಲಿ ನಿರ್ಧರಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕರ್ನಾಟಕದ ವಿವಿಧ 10 ಜಿಲ್ಲಾ ಬಿಜೆಪಿ ಕಚೇರಿಗಳ ಉದ್ಘಾಟನೆಯನ್ನು ಇಂದು ನೆರವೇರಿಸಲಿದ್ದಾರೆ. ಇದರ ಅಧಿಕೃತ ಕಾರ್ಯಕ್ರಮ ಇಂದು ಕೊಪ್ಪಳದಲ್ಲಿ ನಡೆಯಲಿದೆ. ಆರಂಭದಲ್ಲಿ ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರಿಗೆ ಅಧಿಕೃತವಾಗಿ ಆಹ್ವಾನ ಹೋಗಿರಲಿಲ್ಲ. ಹೀಗಾಗಿ ಅವರು ಮುನಿಸಿಕೊಂಡಿದ್ದರು. ಇಲ್ಲದೆ ಬಿಜೆಪಿಯ ಜನಸಂಕಲ್ಪ ಯಾತ್ರೆಗೂ ಅವರನ್ನು ಕರೆಯದೆ ನಿರ್ಲಕ್ಷಿಸಲಾಗಿತ್ತು.
ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ದಿಢೀರ್ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪನವರ ಮನೆಗೆ ಹೋಗಿ ಅವರನ್ನು ಆಹ್ವಾನಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರಿಗೆ ವರಿಷ್ಠರು ಸೂಚಿಸಿದರು. ಯಡಿಯೂರಪ್ಪನವರನ್ನು ಭೇಟಿ ಮಾಡಿದ ರವಿಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬೇಸರ ಶಮನ ಮಾಡುವ ಪ್ರಯತ್ನ ನಡೆಸಿದರು ಎಂದು ತಿಳಿದುಬಂದಿದೆ.