ಹೊಸ ಪಕ್ಷ ಘೋಷಿಸುವ ಮೂಲಕ ರಾಜಕೀಯದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ ಜನಾರ್ದನ ರೆಡ್ಡಿ; ಬಿಜೆಪಿಗೆ ಸಂಕಷ್ಟ
ರಾಜ್ಯ ಬಿಜೆಪಿಗೆ ಇದೀಗ ಸಂಕಷ್ಟ ಎದುರಾಗಿದೆ. ರಾಜಕೀಯ ವಲಯದಿಂದ ಕಣ್ಮರೆಯಾಗಿದ್ದ ಬಿಜೆಪಿಯ ಮಾಜಿ ಸಚಿವ ಜನಾರ್ದನರೆಡ್ಡಿ ಈಗ ಮತ್ತೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದ್ದಾರೆ. ಇಂದು ಮುಂಜಾನೆ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ, ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
Published: 25th December 2022 12:35 PM | Last Updated: 25th December 2022 12:47 PM | A+A A-

ಜನಾರ್ಧನ ರೆಡ್ಡಿ
ಬೆಂಗಳೂರು: ರಾಜ್ಯ ಬಿಜೆಪಿಗೆ ಇದೀಗ ಸಂಕಷ್ಟ ಎದುರಾಗಿದೆ. ರಾಜಕೀಯ ವಲಯದಿಂದ ಕಣ್ಮರೆಯಾಗಿದ್ದ ಬಿಜೆಪಿಯ ಮಾಜಿ ಸಚಿವ ಜನಾರ್ದನರೆಡ್ಡಿ ಈಗ ಮತ್ತೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದ್ದಾರೆ. ಇಂದು ಮುಂಜಾನೆ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ, ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಧೀಮಂತ ನಾಯಕ, ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇಂದು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. 18ನೇ ವಯಸ್ಸಿನಿಂದಲೇ ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ನಂಬಿಕೊಂಡು ಬಂದವನು ನಾನು ಎಂದು ಹೇಳಿದರು.
ಸುದೀರ್ಘವಾಗಿ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಘೋಷಿಸಿದರು. ರಾಜ್ಯದಾದ್ಯಂತ ಹೊಸ ಪಕ್ಷವನ್ನು ಸಂಘಟನೆ ಮಾಡುವೆ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುವೆ. ರಾಜ್ಯದ ಪ್ರತಿಯೊಂದು ಮನೆಗೆ ತೆರಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ರಾಜಕೀಯದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ ಜನಾರ್ದನ ರೆಡ್ಡಿ; ಬಿಜೆಪಿಗೆ ಸಂಕಷ್ಟ, ಇತ್ತ ಒತ್ತಡಕ್ಕೆ ಒಳಗಾದ ಶ್ರೀರಾಮುಲು
ಮುಂದುವರಿದು, ನನ್ನ ಜೊತೆ ತನ್ನ ಆಪ್ತ ಗೆಳೆಯ ಶ್ರೀರಾಮುಲು ಅವರಿಗೆ ಬರುವಂತೆ ಹೇಳಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಮುಂದಿನ ದಿನಗಳಲ್ಲಿ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುವೆ. ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಎಂದರು.
ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಾಯಿತು. ಹೀಗಾಗಿ, ನಾನು ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ. 10 ರಿಂದ 155 ದಿನಗಳಲ್ಲಿ ಪಕ್ಷದ ಚಿಹ್ನೆ, ಕಚೇರಿ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.
'ರಾಜ್ಯ ರಾಜಕಾರಣದಲ್ಲಿ ನನ್ನವರು ಎಂದುಕೊಂಡವರಿಂದಲೇ ಮೋಸ ಹೋದೆ. ಕಷ್ಟದಲ್ಲಿ ಯಾರೂ ನನ್ನ ಜೊತೆ ನಿಂತಿಲ್ಲ. ಇದನ್ನು ನನ್ನ ಸ್ನೇಹಿತರು ಈಗಲೂ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ನು ಯಾವ ನಾಯಕರು ನನ್ನ ಮನೆಗೆ ಬಂದಿಲ್ಲ. ಅವರಿಬ್ಬರು ಮಾತ್ರ ನನಗೆ ಧೈರ್ಯ ಹೇಳಿದರು. ಅವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ' ಎಂದು ರೆಡ್ಡಿ ಹೇಳಿದರು.
'2018ರಲ್ಲಿಯೇ ನಾನು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಬಿಜೆಪಿಗೆ 104 ಸ್ಥಾನ ಬಂದಾಗ ಅಮಿತ್ ಶಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದವು' ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ
ಹೊಸ ಪಕ್ಷವನ್ನು ಘೋಷಿಸಿದ ಜನಾರ್ದನ ರೆಡ್ಡಿ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸುವುದನ್ನು ಖಚಿತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಇದನ್ನೂ ಓದಿ: ಡಿ.25ರಂದು ರಾಜಕೀಯ ಭವಿಷ್ಯ ಕುರಿತು ನಿರ್ಧಾರ ಪ್ರಕಟಿಸುವೆ: ಜನಾರ್ದನ ರೆಡ್ಡಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲು ಬಳ್ಳಾರಿಗೆ ಸುಷ್ಮಾ ಸ್ವರಾಜ್ ಬಂದರು. ಶ್ರೀರಾಮುಲು ಜೊತೆಗೆ ಸುಷ್ಮಾ ಸ್ವರಾಜ್ ಅವರು ಘಟಾನುಘಟಿ ನಾಯಕರೊಂದಿಗೆ ನಮ್ಮ ಕಚೇರಿಗೆ ಬಂದರು. ಅಂದು, ಕಚೇರಿ ಬಿಟ್ಟು ನನ್ನ ಪರ ಕೆಕಸ ಮಾಡಬೇಕು ಎಂದು ಹೇಳಿದರು. ಅವರಲ್ಲಿ ತಾಯಿ ರೂಪ ಕಂಡೆ. ಪಾದ ಮುಟ್ಟಿ ನಮಸ್ಕಾರ ಮಾಡಿದೆ. ಜನಾರ್ಧನ ನೀನೇ ನಮ್ಮ ಮಾಸ್ಟರ್ ಮೈಂಡ್. ನಮ್ಮ ಜೊತೆ ಬಂದು ಕೆಲಸ ಮಾಡು ಎಂದಾಗ ನಾನು ಏನೂ ಮಾತನಾಡದೆ ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಹೊಸ ಪಕ್ಷ ಘೋಷಣೆ ಮಾಡಿರುವುದು ಬಿಜೆಪಿಯೊಳಗೆ ತಳಮಳ ಶುರುವಾಗುವಂತೆ ಮಾಡಿದೆ.