
ಬೆಂಗಳೂರು: ಕೇಂದ್ರ 'ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಹುದ್ದೆಯನ್ನೇ ರೂ.2000 ಕೋಟಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ' ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ರಾಜ್ಯ ಬಿಜೆಪಿ ಶನಿವಾರ ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ ಟ್ವಿಟಕ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನಿಮ್ಮ ಟೂಲ್‌ಕಿಟ್ ಭಾಗವಾದ ಕಮಿಷನ್ ಎಂಬ ಸುಳ್ಳನ್ನು ಎಷ್ಟು ಬಾರಿ ಕೂಗಿ ಹೇಳಿದರೂ ಅದು ಸತ್ಯವಾಗುವುದಿಲ್ಲ. ಸಾಕ್ಷ್ಯ ಕೊಡಿ ಎಂದು ಪ್ರಧಾನಮಂತ್ರಿಗಳ ಕಚೇರಿ ಕೇಳಿದಾಗ ಕೊಡಲು ಸಾಕ್ಷ್ಯವಿರಲಿಲ್ಲ. ನ್ಯಾಯಾಲಯಕ್ಕೂ ಕೊಡಲು ಸಾಕ್ಷ್ಯವಿಲ್ಲದೆ ತಪ್ಪಿಸಿಕೊಂಡು ಓಡಾಡಿದ ಮೇಲೂ ಸುಳ್ಳಿನ ಚಲಾವಣೆಗಿಳಿದ ತಮ್ಮ ಧೈರ್ಯ ಅಪ್ರತಿಮ ಎಂದು ಹೇಳಿದೆ.
ಕೆರೆಗಳ ನೀರು ತುಂಬಿಸುತ್ತೇವೆ ಎಂದು ಸಿದ್ದರಾಮಯ್ಯ ಸರ್ಕಾರ 1,43,341 ಕೋಟಿ ರೂ. ಬಿಡುಗಡೆ ಮಾಡಿ ಜಾಣ ನಿದ್ರೆಗೆ ಜಾರಿತು. ನಿಮ್ಮ ಸರ್ಕಾರದ ಅವಧಿ ಮುಗಿಯುವ ಕಾಲಕ್ಕೂ ನೀರು ತುಂಬಿಸಲು ಯಾವುದೇ ಕಾಮಗಾರಿಯನ್ನು ಆರಂಭ ಮಾಡಲಿಲ್ಲ. ಯೋಜನೆ ಹೆಸರಲ್ಲಿ ನಿಮ್ಮ ಸಹೋದ್ಯೋಗಿಗಳ ಜೇಬು ತುಂಬಿದವು. ಕೊನೆಗೆ ಕೆರೆಗಳು ತುಂಬಿದ್ದು ಮಳೆಯಿಂದ.
ನಿಮ್ಮವರ ಗ್ರಾನೈಟ್ ಗಣಿಗಾರಿಕೆಗೆ 7,785 ಹೆಕ್ಟೇರ್ ಅರಣ್ಯ ಕೊಟ್ಟು, ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಭ್ರಷ್ಟಾಚಾರ ಬೇಯಿಸಿ ನುಂಗಿದ್ದಕ್ಕೇ ಜನ ಸಿದ್ದರಾಮಯ್ಯರ ಸರ್ಕಾರ ತಿರಸ್ಕರಿಸಿದ್ದು. ಆದರೂ ಅಧಿಕಾರಕ್ಕೆ ಬರಲು ಬೇರೆ ದಾರಿ ಕಂಡುಕೊಂಡಾಗ ಉಪಚುನಾವಣೆಯಲ್ಲೂ ಜನ ನಿಮಗೆ ಪಾಠ ಕಲಿಸಿದ್ದರು ಎಂಬುದು ನೆನಪಿರಲಿ ಎಂದು ತಿಳಿಸಿದೆ.
ಕಾಂಗ್ರೆಸ್-ಜೆಡಿಎಸ್ ಕುಟುಂಬ ರಾಜಕೀಯ ಪಕ್ಷಗಳು. ಅವು ಭ್ರಷ್ಟತೆಯಿಂದ ಕೂಡಿವೆ. ಕಾಂಗ್ರೆಸ್ ಬಂದಾಗ ದೆಹಲಿಯ ಎಟಿಎಂ ಆಗುತ್ತದೆ. ಜೆಡಿಎಸ್ ಬಂದರೆ ಕುಟುಂಬದ ಎಟಿಎಂ ಆಗುತ್ತದೆ. ರಾಜ್ಯದ ಜನರು ಇವೆರಡು ಪಕ್ಷಗಳಿಂದ ಬೇಸತ್ತು ಹೋಗಿದ್ದಾರೆ. ಇಂತಹ ಪಕ್ಷಗಳೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದೆ, ನಮ್ಮ ಡಬಲ್ ಎಂಜಿನ್ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ. ಕುಟುಂಬವಾದ, ಭ್ರಷ್ಟಾಚಾರ ಮುಕ್ತತೆಗಾಗಿ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿ ವಿಜಯಶಾಲಿಯಾಗಿಸಿ. ಸಮೃದ್ಧ, ಸಂತುಷ್ಟ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ರಚಿಸುವ ಸಂಕಲ್ಪ ಮಾಡಬೇಕು ಎಂದಿದೆ.
Advertisement