ಕಾಂಗ್ರೆಸ್ ನವರು ಸಿಎಂ ಆಗಲು ಬಿಡುವುದಿಲ್ಲ, ಮುಂದಿನ ಬಾರಿಯೂ ಬಿಜೆಪಿಗೆ ಅಧಿಕಾರ: ಬಿ.ಎಸ್ ಯಡಿಯೂರಪ್ಪ
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಪಟ್ಟದ ರೇಸ್ ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Published: 21st July 2022 11:42 AM | Last Updated: 21st July 2022 01:33 PM | A+A A-

ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಪಟ್ಟದ ರೇಸ್ ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಒಂದು ಮಾತು ಹೇಳಲು ಇಚ್ಚೆ ಪಡುತ್ತೇನೆ. ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ರೀತಿಯಲ್ಲಿ ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಎಂದು ಬಡಿದಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ಮುಖ್ಯಮಂತ್ರಿಯಾಗಲು ನಾವು ಬಿಡುವುದಿಲ್ಲ. ಬಿಜೆಪಿಯವರೇ ರಾಜ್ಯದ ಮುಖ್ಯಮಂತ್ರಿಯಾಗುವುದು. ನೂರಕ್ಕೆ ನೂರು ಬಹುಮತದಿಂದ ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಬಹಳ ಶ್ರಮ ಹಾಕಿ ವಿಜಯೇಂದ್ರ ಪ್ರಯತ್ನದಿಂದ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಈಗ ನಾರಾಯಣ ಗೌಡರು ಜಿಲ್ಲೆಯಲ್ಲಿ ಮೂರ್ನಾಲ್ಕು ಕ್ಷೇತ್ರ ಗೆಲ್ಲುವ ವಾತಾವರಣ ಸೃಷ್ಟಿ ಮಾಡಿದ್ದಾರೆಹೀಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಇಂದು ಸಭೆ ಆಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆ ಬೇಡ ಎನ್ನೋದಕ್ಕೆ ನಾನೇನು ಕಾವಿ ಹಾಕಿಲ್ಲ, ಖಾದಿ ಬಟ್ಟೆ ಹಾಕಿದ್ದೇನೆ: 'ಸಿದ್ದು' ಗೆ ಡಿಕೆಶಿ ಗುದ್ದು!
ಹಳೇಯ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತದ ಮೇಲೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಜೆಡಿಎಸ್ ಕಣ್ಣಿಟ್ಟಿವೆ. ರಾಜ್ಯ ರಾಜಕಾರಣದ ಮೇಲೆ ಒಕ್ಕಲಿಗ ಸಮುದಾಯ ಹೆಚ್ಚು ಪ್ರಭಾವವನ್ನು ಬೀರುತ್ತಿದ್ದು, ಆ ಸಮಾಜದ ಬೆಂಬಲವಿಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿವೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್, ಒಕ್ಕಲಿಗ ಸಮುದಾಯದ ಬೆಂಬಲ ಕೋರಿದ್ದರು. ಆದರೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ನಡೆಯನ್ನು ವ್ಯಂಗ್ಯ ಮಾಡಿದ್ದರು.