ಮೊದಲು ಬಾಯಿ ಮುಚ್ಚಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿ: ಡಿ ಕೆ ಶಿವಕುಮಾರ್ ಗರಂ

ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ, ನಿಮ್ಮ ನಿಮ್ಮ ಸಮುದಾಯಗಳನ್ನು ಕಾಂಗ್ರೆಸ್ ನತ್ತ ಸೆಳೆಯಿರಿ, ಎಲ್ಲಾ ಶಾಸಕರೂ ಮುಖ್ಯಮಂತ್ರಿ ಅಭ್ಯರ್ಥಿನೇ, ಎಲ್ಲರೂ ಮೊದಲು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ, ನಿಮ್ಮ ನಿಮ್ಮ ಸಮುದಾಯಗಳನ್ನು ಕಾಂಗ್ರೆಸ್ ನತ್ತ ಸೆಳೆಯಿರಿ, ಎಲ್ಲಾ ಶಾಸಕರೂ ಮುಖ್ಯಮಂತ್ರಿ ಅಭ್ಯರ್ಥಿನೇ, ಎಲ್ಲರೂ ಮೊದಲು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳ ಮೂಲಕ ಪಕ್ಷದ ಶಾಸಕರು, ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಅವರು ನಿಮಗೆ ಪಕ್ಷ, ನಾಯಕರ ಮೇಲೆ ಅಭಿಮಾನ, ಪ್ರೀತಿಯಿದ್ದರೆ ಮೊದಲು ವ್ಯಕ್ತಿಪೂಜೆ ಬಿಟ್ಟು ಬೆಳಗ್ಗೆಯಿಂದ ರಾತ್ರಿಯವರೆಗೆ ಪಕ್ಷಕ್ಕಾಗಿ ದುಡಿಯಿರಿ, ಮೊದಲು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿ, ನಾನು ಪಕ್ಷದ ಪ್ರತಿಯೊಬ್ಬರಿಗೂ ಹೇಳುತ್ತಿದ್ದೀನೆ, ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ, ನನ್ನ ಲೆವಲ್‍ಗೆ ಮಾತನಾಡೋರು ಇದ್ದರೇ ನಾನು ಮಾತಾಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್‌ಗೆ ಪರೋಕ್ಷವಾಗಿ ಡಿಕೆಶಿ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊನ್ನೆಯಷ್ಟೇ ಸೋನಿಯಾ ಗಾಂಧಿ ಮೇಲೆ ಇಡಿ ವಿಚಾರಣೆ ಖಂಡಿಸಿ ಫ್ರೀಡಂಪಾರ್ಕ್ ನಿಂದ ರಾಜಭವನದವರೆಗೆ ರಾಜಭವನ ಚಲೋದಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದರು. ಇನ್ನು ಮುಂದಿನ ತಿಂಗಳು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯಲಿದ್ದು ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಬಣದ ಶಾಸಕರು, ಕಾರ್ಯಕರ್ತರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಕೂಗು ಜೋರಾಗಿದೆ.

ಅದಕ್ಕೆ ಕೌಂಟರ್ ಆಗಿ ಡಿ ಕೆ ಶಿವಕುಮಾರ್ ಬಣದ ಕಾರ್ಯಕರ್ತರು ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎನ್ನುತ್ತಿದ್ದರು. ಈ ವಿಚಾರಕ್ಕೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಯಾರು ಆಗಬೇಕೆಂದು ಬೆಂಗಳೂರು, ಮೈಸೂರಲ್ಲಿ, ಕಲಬುರಗಿಯಲ್ಲಿ ತೀರ್ಮಾನವಾಗುವುದಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದರು.

ಸಿಎಂ ಖುರ್ಚಿಯ ಬಣ ಬಡಿದಾಟದಿಂದ ಆಕ್ರೋಶಗೊಂಡಂತೆ, ಬೇಸತ್ತು ಹೋದಂತೆ ಕಂಡುಬಂದ ಡಿ ಕೆ ಶಿವಕುಮಾರ್, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಆಯ್ಕೆಯಾಗಿ ಬಂದ ಶಾಸಕರೆಲ್ಲರೂ ಸಿಎಂ ಸ್ಥಾನಕ್ಕೆ ಅರ್ಹರು, ಎಲ್ಲಾ ಶಾಸಕರೂ ಸಿಎಂ ಅಭ್ಯರ್ಥಿಯೇ. ಈಗ ಅದಲ್ಲ ಮುಖ್ಯ, ಮೊದಲು ಬಾಯಿಮುಚ್ಚಿಕೊಂಡು ಕಾಂಗ್ರೆಸ್ ಪಕ್ಷಕ್ಕೆ, ಅದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ, ನಾನು ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಗರಂ ಆಗಿಯೇ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com