'ದಯವಿಟ್ಟು ಇದೊಂದು ಬಾರಿ ಸ್ಪರ್ಧೆ ಮಾಡಿ': ಹೊನ್ನಾಳಿಯಲ್ಲಿ ಬಿಎಸ್ ವೈ ಮುಂದೆ ಎಂಪಿ ರೇಣುಕಾಚಾರ್ಯ ಕಣ್ಣೀರು!

ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ ಭದ್ರ ನೆಲೆ ಕೊಟ್ಟ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಟ್ಟುಕೊಟ್ಟು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದಾಗಿ ನಿನ್ನೆ ತಾನೇ ಬಿ ಎಸ್ ಯಡಿಯೂರಪ್ಪ ಘೋಷಿಸಿದರು.
ಶಾಸಕ ಎಂ ಪಿ ರೇಣುಕಾಚಾರ್ಯ
ಶಾಸಕ ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ ಭದ್ರ ನೆಲೆ ಕೊಟ್ಟ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಟ್ಟುಕೊಟ್ಟು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದಾಗಿ ನಿನ್ನೆ ತಾನೇ ಬಿ ಎಸ್ ಯಡಿಯೂರಪ್ಪ ಘೋಷಿಸಿದರು.

ತಾವು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಬಿ ಎಸ್ ಯಡಿಯೂರಪ್ಪನವರು ಹೇಳಿದ ಮಾತು ಅವರ ಸಾಕಷ್ಟು ಅಭಿಮಾನಿಗಳಿಗೆ, ಬಿಜೆಪಿಯಲ್ಲಿ ಅವರ ಬೆಂಬಲಿಗ ನಾಯಕರಿಗೆ ಆಘಾತ, ಅಚ್ಚರಿ, ಬೇಸರ ಒಟ್ಟೊಟ್ಟಿಗೆ ಆಗಿದೆ. ನಿನ್ನೆ ಚಿತ್ರದುರ್ಗದಲ್ಲಿ ಕಣ್ಣೀರು ಹಾಕಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಇಂದು ತಮ್ಮ ಮನೆಗೆ ಬಂದಿದ್ದ ಬಿ ಎಸ್ ಯಡಿಯೂರಪ್ಪನವರ ಮುಂದೆಯೇ ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ. 

ಯಡಿಯೂರಪ್ಪನವರಿಗೆ ಬಹಳ ಆಪ್ತರಾಗಿರುವ ರೇಣುಕಾಚಾರ್ಯ ಅವರನ್ನು ಸಮಾಧಾನ ಮಾಡಲೆಂದು ಇಂದು ಹೊನ್ನಾಳಿಯ ಅವರ ಮನೆಗೇ ಹೋಗಿದ್ದರು. ಬಾಗಿಲ ಬಳಿ ಯಡಿಯೂರಪ್ಪನವರನ್ನು ಕಾಣುತ್ತಲೇ ರೇಣುಕಾಚಾರ್ಯ ಅವರಿಗೆ ದುಃಖ ಉಮ್ಮಳಿಸಿ ಬಂತು. ಒಂದೇ ಸಮನೆ ಕಣ್ಣೀರು ಹಾಕುತ್ತಾ ಮನೆಯೊಳಗೆ ಬರಮಾಡಿಕೊಂಡರು. 

ರೈತನಾಯಕ ಮಹಾನಾಯಕ ಕನ್ನಡಿಗರ ಜನಮನ ಗೆದ್ದ ಧೀಮಂತ ಹೋರಾಟಗಾರ ಎಲ್ಲಾ ವರ್ಗದ ನಾಯಕ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ರಾಜಕೀಯದಲ್ಲಿ ಸಕ್ರಿಯವಾಗಿರಬೇಕೆಂದು ನನ್ನ ಅಪೇಕ್ಷೆ. ನಮ್ಮ ಹೊನ್ನಾಳಿ ಪಟ್ಟಣಕ್ಕೆ ಸ್ಕೂಟರ್ ನಲ್ಲಿ ಬಂದು ಸಂಘಟನೆ ಮಾಡುತ್ತಿದ್ದರು. ಯಡಿಯೂರಪ್ಪನವರ ಇಂದಿನ ಹೇಳಿಕೆ ನನಗೆ ವೈಯಕ್ತಿಕವಾಗಿ ಆಶ್ಚರ್ಯ ಮತ್ತು ಅಘಾತವಾಗಿದೆ.

ಯಡಿಯೂರಪ್ಪನವರು ಹಳ್ಳಿ ಹಳ್ಳಿಗೆ ತಿರುಗಾಡಿ ಪಕ್ಷ ಸಂಘಟನೆ ಪಾದಯಾತ್ರೆ ಹೋರಾಟಗಳನ್ನು ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಇಂದಿಗು ಅದು ಸತ್ಯ. ಯಡಿಯೂರಪ್ಪನವರು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಅವರು ಏನು ಮಾತನಾಡುತ್ತಾರೆಂದು ಶಾಸಕರು ಜನರು ಕುತೂಹಲದಿಂದ ಕಾಯುತ್ತಿರುತ್ತಾರೆ ಎಂದರು. 

ಇದೊಂದು ಬಾರಿ ಸ್ಪರ್ಧೆ ಮಾಡಿ: ಯಡಿಯೂರಪ್ಪನವರು ಮುಂದಿನ ಚುನಾವಣೆಯೊಂದರಲ್ಲಿಯಾದರೂ ಸ್ಪರ್ಧೆ ಮಾಡಬೇಕು, ಅದು ನಮ್ಮೆಲ್ಲರ ಪ್ರೀತಿಯ ಒತ್ತಾಯ, ವಿಜಯೇಂದ್ರ ಅವರು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ, ರಾಷ್ಟ್ರನಾಯಕರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪನವರು ಮಾಸ್ ಲೀಡರ್, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com